ಹೊನ್ನಾವರ:  ಕಲೆ ಕಲಾವಿದರನ್ನು ಪ್ರೋತ್ಸಾಹಿಸಿದರೆ ಕಲೆಯ ಜೊತೆ ನಮ್ಮ ಭವ್ಯ ಸಂಸ್ಕೃತಿಯೂ ಬೆಳೆಯುತ್ತದೆ. ಪುರಾಣ ಪುಣ್ಯ ಕಥೆಗಳು ಜೀವನ ಮೌಲ್ಯವನ್ನು ಸಾರಿದ್ದು ಅದು ಕಲಾವಿದರ ಅಭಿವ್ಯಕ್ತಿಯಿಂದಾಗಿ ಜನತೆಯ ಮೇಲೆ ಅಗಾಧ ಪರಿಣಾಮ ಬೀರುತ್ತದೆ. ಆದ್ದರಿಂದ ನಮ್ಮ ಸಾಮಾಜಿಕ ಸುವ್ಯವಸ್ಥೆಗೆ ಸಾಂಸ್ಕೃತಿಕ ಕಲೆಯ ಕೊಡುಗೆ ಅಪಾರ ಎನ್ನುವುದರಲ್ಲಿ ಅನುಮಾನವಿಲ್ಲ ಎಂದು ಧರ್ಮದರ್ಶಿ ಡಾ|| ಜಿ.ಜಿ.ಸಭಾಹಿತ ಅಭಿಪ್ರಾಯ ಪಟ್ಟರು. ಅವರು ಕವಲಕ್ಕಿಯಲ್ಲಿ ನಾಟ್ಯಶ್ರೀ ಯಕ್ಷಕಲಾ ಪ್ರತಿಷ್ಠಾನವು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಾರವಾರ ಇವರ ಸಹಯೋಗದೊಂದಿಗೆ ಏರ್ಪಡಿಸಿದ ಸಾಂಸ್ಕೃತಿಕ ಸಂಭ್ರಮದ ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು. ರಾಮಾಯಣ ಮತ್ತು ಮಹಾಭಾರತದಂತಹ ಜೀವಂತ ಕಾವ್ಯಗಳಲ್ಲಿನ ಆದರ್ಶಗಳು ಯಕ್ಷಗಾನ ಕಲೆಯ ಮೂಲಕ ಶತ ಶತಮಾನಗಳಿಂದ ಜನಮಾನಸದಲ್ಲಿ ಉಳಿದು ಬೆಳೆದು ಬಂದಿದೆ ಎಂದರು. 
   
 ಕಾರ್ಯಕ್ರಮ ಉದ್ಘಾಟಿಸಿದ ಕೊಳಗದ್ದೆಯ ಶ್ರೀ ಸಿದ್ಧಿವಿನಾಯಕ ವಿದ್ಯಾಮಂದಿರದ ಮುಖ್ಯದ್ಯಾಪಕ ಶ್ರೀ ಪಿ.ಜಿ.ಹೆಗಡೆ ಮಾತನಾಡಿ ನಮ್ಮ ಪೂರ್ವಿಕರು ಜೀವನಾದರ್ಶಗಳನ್ನು ಬಿತ್ತಲು ವಿವಿಧ ಕಲಾ ಪ್ರಕಾರಗಳನ್ನು ಮಾಧ್ಯಮವನ್ನಾಗಿಸಿಕೊಂಡರು. ಈ ಭಾಗದಲ್ಲಿ ಪರಿಪೂರ್ಣ ಕಲೆ ಎನಿಸಿದ ಯಕ್ಷಗಾನ ಅಭಿನಯ ನೃತ್ಯ,    ಕುಣಿತ ಮತ್ತು ಮಾತುಗಾರಿಕೆಯ ಮೂಲಕ ಜನತೆಯಲ್ಲಿ ಪೌರಾಣಿಕ ಪ್ರಜ್ಞೆಯೊಂದಿಗೆ ನೈತಿಕತೆಯನ್ನು ಪ್ರಚುರ ಪಡಿಸುವಲ್ಲಿ ಯಶಸ್ವಿಯಾಗಿದೆ ಎಂದರು.

   ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ತಾಲೂಕಾ ಕ್ಷೇತ್ರ ಸಮನ್ವಯಾಧಿಕಾರಿ ಶ್ರೀ ಎಸ್.ಎಂ.ಹೆಗಡೆ ಮಾತನಾಡಿ ಸಾಂಸ್ಕೃತಿಕ ಕಲೆಯ ಮೌಲ್ಯ ಮೊದಲು ಮನದಲ್ಲಿ ಅರಳಿದರೆ ಮನೆ ಸಹಜವಾಗಿ ಸುಂದರ ಸಾಂಸ್ಕೃತಿಕ ಕಲೆಯ ಮೌಲ್ಯ ಮೊದಲು ಮನದಲ್ಲಿ ಅರಳಿದರೆ ಮನೆ ಸಹಜವಾಗಿ ಸುಂದರ ಸಾಂಸ್ಕೃತಿಕ ತಾಣವಾಗುತ್ತದೆ. ಇಂದಿನ ಮಕ್ಕಳನ್ನು ಮೊಬೈಲ್‌ನಿಂದ ದೂರವಿಡಲು ಬಿಡುವಿನ ಸಮಯದಲ್ಲಿ ಪಾಲಕರು ಸಂಗೀತ, ಭರತನಾಟ್ಯ, ಯಕ್ಷಗಾನದಂತಹ ಸಾಂಸ್ಕೃತಿಕ ಕಲಾ ತರಬೇತಿ ಕೊಡಿಸಬೇಕು. ಆ ಮೂಲಕ ನಮ್ಮ ಸಾಂಸ್ಕೃತಿಕ ಕಲೆಯನ್ನು ಮುಂದಿನ ತಲೆಮಾರಿಗೆ ಕೊಂಡೊಯ್ಯ ಬಹುದು ಎಂದರು.

  ನಾಟ್ಯಶ್ರೀ ಯಕ್ಷಕಲಾ ಪ್ರತಿಷ್ಠಾನದ ಅಧ್ಯಕ್ಷ ಶ್ರೀ ಎಸ್.ಜಿ.ಭಟ್ಟ ಪ್ರಾಸ್ಥವಿಕ ಮಾತುಗಳೊಂದಿಗೆ ಸ್ವಾಗತಿಸಿದರು. ನಾಟ್ಯಶ್ರೀ ಕಾರ್ಯದರ್ಶಿ ಶ್ರೀ ಕೆ.ವಿ.ಹೆಗಡೆ ಕಾರ್ಯಕ್ರಮ ನಿರೂಪಿಸಿ ವಂದನಾರ್ಪಣೆ ಮಾಡಿದರು.
  
ಸಾಂಸ್ಕೃತಿಕ ಸಂಭ್ರಮದ ಅಂಗವಾಗಿ ಕುಮಾರಿ ಭಾಗ್ಯಶ್ರೀ ಭಟ್ ಇವಳಿಂದ ಸುಶ್ರಾವ್ಯವಾಗಿ ಸುಗಮ ಸಂಗೀತ ಗಾಯನ ನಡೆಯಿತು. ತಬಲಾದಲ್ಲಿ ಶ್ರೀ ವಿನಾಯಕ ಭಟ್ಟ ಹರಡಸೆ, ಹಾಗೂ ಸಂವಾದಿನಿಯಲ್ಲಿ ಶ್ರೀ ಹರಿಶ್ಚಂದ್ರ ನಾಯ್ಕ ಇಡಗುಂಜಿ ಸಹಕರಿಸಿದರು. ನಂತರ ಕಂಸವಧೆ ಯಕ್ಷಗಾನ ಪ್ರದರ್ಶನ ನಡೆಯಿತು. ಹಿಮ್ಮೇಳದಲ್ಲಿ ಶ್ರೀ ಕೃಷ್ಣ ಹೆಗಡೆ ಬೆಳ್ಳಿಮನೆ, ಗಣಪತಿ ಹೆಗಡೆ  ಹಂದಿಮುಲ್ಲೆ ಹಾಗೂ ಶ್ರೀ ನಯನ ಕುಮಾರ ಸಹಕರಿಸಿದರು ಕಂಸನಾಗಿ ಶ್ರೀ ನರಸಿಂಹ ಚಿಟ್ಟಾಣಿ ಅಮೋಘ ಅಭಿನಯ ನೀಡಿ ಪದ್ಮಶ್ರೀ ಚಿಟ್ಟಾಣಿಯವರನ್ನು ನೆನೆಪಿಸಿದರು. ಕೃಷ್ಣನಾಗಿ ಶ್ರೀ ನಿರಂಜನ ಜಾಗನಹಳ್ಳಿ ಹಾಗೂ ಬಲರಾಮನಾಗಿ ಶ್ರೀ ವಿನಯ್ ಕುಂಕಿ ಉತ್ತಮ ಅಭಿನಯ ಪ್ರದರ್ಶಿಸಿದರು. ಅಕ್ರೂರನಾಗಿ ಶ್ರೀ ಪ್ರಭಾಕರ ಚಿಟ್ಟಾಣಿ ಹಾಗೂ ರಜಕನಾಗಿ ಶ್ರೀ ನಾರಾಯಣ ಹೆಗಡೆ ಕೋರೆ ಕಥಾನಕ ಸುಂದರವಾಗಿ ಕಳೆಕಟ್ಟುವಂತೆ ಮಾಡಿದರು. ಚಿತ್ರಭಾರತೀ ಬಳಗ ಕಾರ್ಯಕ್ರಮದ ನೇರಪ್ರಸಾರದಲ್ಲಿ ಸಹಕರಿಸಿದರು. ಒಟ್ಟಾರೆ ನಾಟ್ಯಶ್ರೀ ಸಾಂಸ್ಕೃತಿಕ ಸಂಭ್ರಮ ಅತ್ಯುತ್ತಮವಾಗಿ ಮೂಡಿ ಬಂದಿತು.
RELATED ARTICLES  ಕುಮಟಾದ ವಿಲಾಶ್ ಮಾರ್ಬಲ್ಸ್ ಮಾಲಕ ಅಪಘಾತದಲ್ಲಿ ಸಾವು.