ಕುಮಟಾ : ಒಂದೇ ದಿನದಂದು ಅಂತೂ 44 ಫಲಾನುಭವಿಗಳಿಗೆ ಕಣ್ಣು ಪೊರೆ (ಮೋತಿ ಬಿಂದು) ಶಸ್ತ್ರಚಿಕಿತ್ಸೆ ಗಳನ್ನು ಯಶಸ್ವಿಯಾಗಿ ಪೂರೈಸಿರುವುದು ನಮ್ಮ ಆಸ್ಪತ್ರೆಯ ಹಿರಿಮೆಗೊಂದು ಗರಿ ಲಭಿಸಿದಂತಾಗಿದ್ದು ಈ ಕಾರ್ಯ ಸಾಧನೆಗೆ ಕಾರಣರಾದ ನಮ್ಮ ಆಸ್ಪತ್ರೆಯ ನುರಿತ ವೈದ್ಯಾಧಿಕಾರಿ ನೇತ್ರ ತಜ್ಙ ಡಾ.ಮಲ್ಲಿಕಾರ್ಜುನ ಮತ್ತು ಇತ್ತೀಚೆಗಷ್ಟೇ ನೇಮಣೂಕಿಯಾಗಿರುವ ನೇತ್ರತಜ್ಙೆ ಡಾ.ಮೇಘಾ ಎಮ್.ದಿವಾಕರ ಹಾಗೂ ಸಹಕರಿಸಿದ ಆಸ್ಪತ್ರೆಯ ಸಿಬ್ಬಂದಿವರ್ಗದವರೆಲ್ಲರೂ ಅಭಿನಂದನಾರ್ಹರು ಎಂದು ಲಾಯನ್ಸ ರೇವಣಕರ ಚೆರಿಟೆಬಲ್ ಕಣ್ಣಿನ ಆಸ್ಪತ್ರೆಯ ಟ್ರಸ್ಟ್ ನ ಚೇರಮನ್ ಲಾಯನ್ ದೇವಿದಾಸ ಡಿ.ಶೇಟ್ ಅಭಿಪ್ರಾಯಿಸಿದರು.
ಕುಮಟಾ ಲಾಯನ್ಸ ಕಣ್ಣಿನ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆ ಪೂರೈಸಿಕೊಂಡು ಬಿಡುಗಡೆಯಾಗುತ್ತಿರುವ ಹೊನ್ನಾವರ ಭಟ್ಕಳ ಕ್ಯಾಂಪಗಳ ಫಲಾನುಭವಿಗಳನ್ನು ಬೀಳ್ಕೊಡುವ ಸಂದರ್ಭದಲ್ಲಿ ಪಾಲ್ಗೊಂಡು ಅವರು ಮಾತನಾಡುತ್ತ, ಕಳೆದ ಅಕ್ಟೋಬರ ತಿಂಗಳೊಂದರಲ್ಲಿ ಕುಮಟಾ,ಗೋಕರ್ಣ,ಅಂಕೋಲಾ,ಹೊನ್ನಾವರ ಭಟ್ಕಳ ಗಳಲ್ಲಿ ಕ್ಯಾಂಪಗಳ ನಡೆಸಿ ಅಂತೂ 95 ಬಡವೃದ್ಧರಿಗೆ ಉಚಿತ ಮೋತಿಬಿಂದು ಶಸ್ತ್ರಚಿಕಿತ್ಸೆಯನ್ನು ನಮ್ಮ ಆಸ್ಪತ್ರೆಯಲ್ಲಿ ನಡೆಸಿ ಅವರುಗಳು ದೃಷ್ಟಿ ಪಡೆಯಲು ಅನುಕೂಲ ಮಾಡಿಕೊಡಲಾಗಿದೆ ಎಂದರು.
ಚೆರಿಟೆಬಲ್ ಸಂಸ್ಥೆಯಾಗಿ ಅಧಿಕೃತವಾಗಿ ನೊಂದಾಯಿತಗೊಂಡು ಕಳೆದ 15 ವರ್ಷಗಳಿಂದ ಕುಮಟಾದಲ್ಲಿ ಕಾರ್ಯನಿರ್ವಹಿಸುತ್ತಿರುವ ಲಾಯನ್ಸ್ ಹ್ಯುಮೆನಿಟೇರಿಯನ್ ಸರ್ವೀಸ್ ಟ್ರಸ್ಟ್ ಪ್ರತೀ ಗುರುವಾರ ಜಿಲ್ಲೆಯ ಕರಾವಳಿ ತಾಲೂಕುಗಳಲ್ಲಿ ಉಚಿತ ನೇತ್ರ ತಪಾಸಣಾ ಶಿಬಿರಗಳನ್ನು ನಡೆಸಿಕೊಂಡು ಬಂದಿದ್ದು,ಈ ಶಿಬಿರಗಳಲ್ಲಿ ಆಯ್ಕೆಯಾದ ಅರ್ಹ ಬಡ ವೃದ್ಧರಿಗೆ ಎರಡು ದಿನಗಳ ಕಾಲ ಉಚಿತ ಊಟ,ಉಪಹಾರ,ವಸತಿ,ಸಾಗಾಟ ವ್ಯವಸ್ಥೆ ಸಹಿತ ಉಚಿತ ಮೋತಿಬಿಂದು ಶಸ್ತ್ರಚಿಕಿತ್ಸೆ ಪೂರೈಸಿಕೊಡುತ್ತ ಬಂದಿದೆ.
ಇತ್ತೀಚೆಗೆ ಈ ಸೌಲಭ್ಯದ ಫಲಾನುಭವಿಗಳಲ್ಲಿ ಏರಿಕೆ ಕಂಡುಬರುತ್ತಿರುವ ಜೊತೆಗೆ ಖಾಸಗಿಯಾಗಿ ಆಸ್ಪತ್ರೆಗೆ ತಪಾಸಣೆಗೆ ಬರುವ ಹೊರ ರೋಗಿಗಳು ಹಾಗೂ ಶಸ್ತ್ರಚಿಕಿತ್ಸೆ ಗೆ ಬರುವವರ ಸಂಖ್ಯೆ ಯಲ್ಲಿಯೂ ಗಣನೀಯ ಏರಿಕೆ ಕಂಡು ಬಂದಿರುವುದರಿಂದ ಇತ್ತೀಚೆಗಷ್ಟೇ ಇನ್ನೋರ್ವ ನೇತ್ರತಜ್ಙರನ್ನು ನೇಮಣೂಕಿ ಮಾಡಿಕೊಳ್ಳಲಾಗಿದ್ದು ಇದರಿಂದ ಹೆಚ್ಚಿನ ಸಮಯದಲ್ಲಿ ವೈದ್ಯರು ರೋಗಿಗಳ ತಪಾಸಣೆಗೆ ಲಭ್ಯರಿರುವಂತಾಗಿದ್ದು ಈ ಸೌಲ್ಯಭ್ಯದ ಸದುಪಯೋಗಪಡೆಯುವಂತೆ ಕರೆ ನೀಡಿದರು.
ಆಸ್ಪತ್ರೆಯಿಂದ ಬಿಡುಗಡೆಗೊಳ್ಳುತ್ತಿರುವ ಫಲಾನುಭವಿಗಳು ಆಸ್ಪತ್ರೆಯಲ್ಲಿನ ಶುಷ್ರೂಷೆ,ಉಚಿತ ಊಟೋಪಚಾರ,ವಸತಿ ವ್ಯವಸ್ಥೆ ಕುರಿತಾಗಿ ಮೆಚ್ಚುಗೆ ವ್ಯಕ್ಯಪಡಿಸುತ್ತ ಕೃತಜ್ಙತೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಟ್ರಸ್ಟ್ ನ ಸಂಸ್ಥಾಪಕ ಚೇರಮನ್ ಡಾ.ಸಿ.ಎಸ್.ವೇರ್ಣೇಕರ, ಟ್ರಸ್ಟೀ ಡಾ.ಸತೀಶ್ ಪ್ರಭು, ಆಡಳಿತಾಧಿಕಾರಿ ಜಯದೇವ ಬಳಗಂಡಿ, ವೈದ್ಯಾಧಿಕಾರಿಗಳಾದ ಡಾ.ಮಲ್ಲಿಕಾರ್ಜುನ,ಡಾ.ಮೇಘಾ ಎಮ್.ದಿವಾಕರ ಮತ್ತು ಆಸ್ಪತ್ರೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು.
ಎಂದಿನಂತೆ ಎಲ್ಲ ಫಲಾನುಭವಿಗಳನ್ನು ಆಸ್ಪತ್ರೆಯ ಸ್ವಂತ ವಾಹನದಲ್ಲಿ ಹೊನ್ನಾವರ ಹಾಗೂ ಭಟ್ಕಳ ಕ್ಕೆ ಕರೆದೊಯ್ಯುವ ವ್ಯವಸ್ಥೆ ಕಲ್ಪಿಸಲಾಗಿತ್ತು.