ಕಾರವಾರ : ಮನೆ ಹಾಗು ದೇವಾಲಯಗಳಲ್ಲಿ ಬೇರೆಬೇರೆ ರೀತಿಯಲ್ಲಿ ಕಳ್ಳತನ ನಡೆಸುತ್ತಿದ್ದ ದುಷ್ಕರ್ಮಿಗಳು ವಿವಿಧ ಪ್ರಕರಣಗಳಲ್ಲಿ ಬಂಧನಕ್ಕೆ ಒಳಗಾಗುತ್ತಿದ್ದಾರೆ. ಆದರೂ ಕಳ್ಳತನ ಪ್ರಕರಣಗಳು ಅವ್ಯಾಹತವಾಗಿ ವರಿಯಾಗುತ್ತಿದೆ. ಸಿನಿಮೀಯ ರೀತಿಯಲ್ಲಿ ಮಹಿಳೆಯ ಚಿನ್ನದ ಸರ ಕಳ್ಳತನ ಮಾಡಿರುವ ಘಟನೆ ನಡೆದಿದೆ.
ನಡೆದುಕೊಂಡು ಹೋಗುತ್ತಿದ್ದ ಒಂಟಿ ಮಹಿಳೆಯ ಬಳಿ ದಾರಿ ಕೇಳುವ ನೆಪದಲ್ಲಿ ಬಂಗಾರದ ಸರ ದೋಚಿ ಪರಾರಿಯಾದ ಘಟನೆ ಇಂದು ಮಧ್ಯಾಹ್ನ ಉತ್ತರ ಕನ್ನಡ ಜಿಲ್ಲೆಯ ಶಿರಸಿಯ ಭತ್ತದ ಓಣಿಯಲ್ಲಿ ನಡೆದಿದೆ. ಉಷಾ ದಾಮೋದರ ಪೈ ಎಂಬುವವರೇ ಬಂಗಾರದ ಸರ ಕಳೆದುಕೊಂಡವರಾಗಿದ್ದಾರೆ.
ಬಿಳಿ ಕಾರಿನಲ್ಲಿ ಬಂದ ದರೋಡೆಕೋರರಿಂದ ಕೃತ್ಯ ನಡೆದಿದ್ದು, ಅವರು ಕುಮಟಾಕ್ಕೆ ಹೋಗುವ ಮಾರ್ಗ ಕುರಿತು ಕಾರು ನಿಲ್ಲಿಸಿ ಮಹಿಳೆ ಬಳಿ ಕೇಳಿ ಮಹಿಳೆಯ ಕುತ್ತಿಗೆಯಲ್ಲಿದ್ದ ಸರ ಹರಿದು ಪರಾರಿಯಾಗಿದ್ದಾರೆ ಎನ್ನಲಾಗಿದೆ. ಅಂದಾಜು ಮೌಲ್ಯ ₹1.10,000 ಲಕ್ಷ ರೂ ಗಳ ಬಂಗಾರದ ಸರ ಇದಾಗಿದ್ದು ಸಿ.ಪಿ.ಐ. ರಾಮಚಂದ್ರ ನಾಯಕ್ ನೇತೃತ್ವದಲ್ಲಿ ಆರೋಪಿಗಳ ಬಂಧನಕ್ಕೆ ವಿಶೇಷ ತಂಡ ರಚನೆ ಮಾಡಲಾಗಿದ್ದು ಶಿರಸಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿಗಳ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದು ತನಿಖೆ ಕೈಗೊಂಡಿದ್ದಾರೆ.