Breaking News ಕೊಡುವುದಷ್ಟೇ ಮಾಧ್ಯಮದ ಕೆಲಸವಲ್ಲ, ಸಮಾಜಕ್ಕೆ ಉತ್ತಮ ಸಂದೇಶ ಕೊಡುವುದರ ಜೊತೆಗೆ; ಸಮಾಜಕ್ಕೆ ಸಹಾಯಮಾಡುವುದು ಕೂಡ ಮಾಧ್ಯಮದ ಕಾರ್ಯ ಎಂದು ಶ್ರೀ ರವಿ ಹೆಗಡೆ ಹೇಳಿದರು.

ಅಖಿಲ ಹವ್ಯಕ ಮಹಾಸಭೆಯಿಂದ ಆಯೋಜಿತವಾದ ‘ವಿಜಯೀ ಭವ’ ಗೆಲುವಿಗೆ ನೂರಾರು ಮೆಟ್ಟಿಲು ಸರಣಿಯ ಉದ್ಘಾಟನಾ ಕಾರ್ಯಕ್ರಮದಲ್ಲಿ ಅಭ್ಯಾಗತರಾಗಿ ಮಾತನಾಡಿದ ಕನ್ನಡಪ್ರಭ ಹಾಗೂ ಸುವರ್ಣ ನ್ಯೂಸ್ ಪ್ರಧಾನ ಸಂಪಾದಕ ರವಿ ಹೆಗಡೆ ಮಾತನಾಡಿ, ಎತ್ತರದ ಸ್ಥಾನ ಎರುವುದು ಕೆಲವೊಮ್ಮೆ ಸುಲಭ. ಆದರೆ ಆ ಸ್ಥಾನದಲ್ಲಿ ನಾವು ಎಷ್ಟು ಸಮಯ ಇರುತ್ತೇವೆ. ಹೇಗೆ ನಿರ್ವಹಿಸುತ್ತೇವೆ ಎಂಬುದು ನಮ್ಮ ಸಾಧನೆಯನ್ನು ನಿರ್ಧರಿಸತ್ತದೆ. ತಂತ್ರಜ್ಞಾನವನ್ನು ಬಳಸಿಕೊಳ್ಳುವುದರ ಮೂಲಕ ಸ್ಪರ್ಧೆಯನ್ನು ಎದುರಿಸಲು ಸಾಧ್ಯ. ನಾನು ಕೆಲಸಮಾಡುವ ಪತ್ರಿಕೆಗಳಲ್ಲಿ ತಂತ್ರಜ್ಞಾನವನ್ನು ಸಮರ್ಪಕವಾಗಿ ಬಳಸಿಕೊಂಡಿದ್ದರಿಂದ ಅತ್ಯುತ್ತಮ ಕಾರ್ಯಗಳನ್ನು ಮಾಡಲು ಸಾಧ್ಯವಾಯಿತು ಎಂದರು.

ಪರಿಶ್ರಮ , ಒಳ್ಳೆಯ ಜೊತೆಗಾರರು ಹಾಗೂ ಹಿತೈಷಿಗಳ ಆಶೀರ್ವಾದಗಳಿಂದ ಮಹತ್ತರವಾದ ಸಾಧನೆ ಮಾಡಲು ಸಾಧ್ಯ. ಒಳ್ಳೆಯ ಪತ್ರಕರ್ತನಾಗಬೇಕು ಎಂಬುದಷ್ಟೇ ನನ್ನ ಕನಸಾಗಿತ್ತು. ಆರಂಭದಲ್ಲಿ ಕುಮಟಾದಲ್ಲಿ ಪತ್ರಿಕಾ ವಿತರಣೆ, ಜಾಹೀರಾತು ಸೇರಿದಂತೆ ಎಲ್ಲಾ ಕಾರ್ಯಗಳನ್ನು ನಿರ್ವಹಿಸಿದ್ದನ್ನು ನೆನಪಿಸಿಕೊಂಡ ಅವರು, ಅಂದು ನಾನು ಆ ಎಲ್ಲಾ ಕಾರ್ಯಗಳನ್ನು ನಿರ್ವಹಿಸಿದ್ದರಿಂದ, ಇಂದು ಪ್ರಧಾನ ಸಂಪಾದಕನ ಹುದ್ದೆಯನ್ನು ನಿರ್ವಹಿಸಲು ಸಹಾಯವಾಗುತ್ತಿದೆ. ಕೇವಲ ಬರೆಯುವುದು ಮಾತ್ರ ಮಾಧ್ಯಮವಲ್ಲ. ತಂತ್ರಜ್ಞಾನ, ಆರ್ಥಿಕ ನಿರ್ವಹಣೆಗಳ ಸಮರ್ಪಕ ಬಳಕೆಯಿಂದ ಮಾತ್ರ ಸಂಪಾದಕ ಯಶಸ್ವಿಯಾಗಲು ಸಾಧ್ಯ ಎಂದು ಅಭಿಪ್ರಾಯಪಟ್ಟರು.

RELATED ARTICLES  ಡೋಂಗಿ ಪರಿಸರವಾದಿಗಳಿಂದ ಜಿಲ್ಲೆಯಲ್ಲಿ ಅಭಿವೃದ್ಧಿ ಕುಂಠಿತ-ರಾಜೇಂದ್ರ ನಾಯಕ್

ಸಾಧಕರನ್ನು ನಾಡಿಗೆ ಪರಿಚಯಿಸಿ; ಸಮಾಜಕ್ಕೆ ಸ್ಪೂರ್ತಿ ತುಂಬಬೇಕಾದ ಕಾರ್ಯ ಮಾಧ್ಯಮಗಳದ್ದು. ಮಾಧ್ಯಮಗಳು ಮಾಡಬೇಕಾದ ಕಾರ್ಯವನ್ನು ಹವ್ಯಕ ಮಹಾಸಭೆ ಮಾಡುತ್ತಿದೆ ಎಂದು ಮಹಾಸಭೆಯ ಕಾರ್ಯವನ್ನು ಅಭಿನಂದಿಸಿದರು.

ಬಿಂದು ಜೀರಾ ಕಂಪನಿಯ ಸಂಸ್ಥಾಪಕರಾದ ಸತ್ಯಶಂಕರ ಕೆ ಮಾತನಾಡಿ,ಯಶಸ್ಸೆಂದರೆ ಹಣಗಳಿಸುವುದಲ್ಲ. ನಮ್ಮ ಕ್ಷೇತ್ರದಲ್ಲಿ ಉನ್ನತಸ್ಥಾನಕ್ಕೆ ಏರುವುದೇ ನಿಜವಾದ ಯಶಸ್ಸು. ನನಗೆ ಆ ತೊಂದರೆ ಇದೆ, ಈ ಸಮಸ್ಯೆ ಇದೆ ಎಂದು ಕುಳಿತರೆ ಜೀವನದಲ್ಲಿ ಮುಂದೆ ಬರಲು ಸಾಧ್ಯವಿಲ್ಲ.ಮನಸ್ಸಿನಲ್ಲಿ ಛಲ ಇದ್ದರೆ ಯಶಸ್ಸುಗಳಿಸಲು ಸಾಧ್ಯ. ಸಾಧನೆಯ ಹಾದಿಯಲ್ಲಿ ತೃಪ್ತಿ ಇರಬೇಕು ಆದರೇ ಇನ್ನೂ ಹೆಚ್ಚಿನ ಸಾಧನೆ ಮಾಡುವ ಹಂಬಲ ಇರಬೇಕು ಎಂದು ಕಿವಿಮಾತು ಹೇಳಿದರು.

ಉನ್ನತ ಶಿಕ್ಷಣ ಓದಿಸಲು ಕಷ್ಟವಿದ್ದರಿಂದ ಪೌರೋಹಿತ್ಯ ಮಾಡಲು ಮನೆಯಲ್ಲಿ ಸೂಚಿಸಿದರು. ಆದರೆ ಅದಕ್ಕೆ ಮನಸ್ಸು ಒಪ್ಪದ ಕಾರಣ, ರಿಕ್ಷಾಚಾಲನೆ, ಕಾರು ಬಾಡಿಗೆ, ಫೈನಾನ್ಷಿಯಲ್ ಸರ್ವೀಸ್ ಮುಂತಾದ ಉದ್ಯಮಗಳನ್ನು ಮಾಡುತ್ತಾ, ಮುಂದೆ ನೀರು, ಬಿಂದು ಜೀರಾ ಸೇರಿದಂತೆ ಹಲವು ಉದ್ಯಮವನ್ನು ಮಾಡಿ; ಸಾವಿರಾರು ಜನರಿಗೆ ಉದ್ಯೋಗ ನೀಡಲು ಸಾಧ್ಯವಾಗಿದೆ ಎಂದು ತಮ್ಮ ಯಶಸ್ವಿ ಜೀವನದ ಮೆಟ್ಟಿಲುಗಳನ್ನು ನೆನಪಿಸಿಕೊಂಡರು.

ಅಧ್ಯಕ್ಷರಾದ ಡಾ ಗಿರಿಧರ ಕಜೆ ಮಾತನಾಡಿ, ವಿಜಯೀ ಭವ ಅಂದರೆ ಅದು ಸಭಾಸದರಾಗಿ ಆಮಿಸಿದವರಿಗೆ ಅನ್ವಯಿಸುವುದಾಗಿದೆ. ಅಭ್ಯಾಗತರು ತಮ್ಮ ಕ್ಷೇತ್ರದಲ್ಲಿ ವಿಜಯಿಗಳಾಗಿ ಆಗಿದೆ. ಅವರು ತಮ್ಮ ಅನುಭವವನ್ನು ಈ ಮೂಲಕ ಸಮಾಜಕ್ಕೆ ತೆರೆದಿಡುತ್ತಿದ್ದು, ಅವರ ಅನುಭವವನ್ನು ನಾವು ಸ್ಪೂರ್ತಿಯಾಗಿ ತೆಗೆದುಕೊಂಡು ಉತ್ತಮ ಕಾರ್ಯಮಾಡಲು ಪ್ರವೃತ್ತರಾದಾಗ ಈ ಕಾರ್ಯಕ್ರಮ ಸಾರ್ಥಕವಾಗುತ್ತದೆ. ನಾವು ಪ್ರಯತ್ನ ಪಟ್ಟಾಗ ಮಾತ್ರ ಭಗವಂತನ ಬೆಂಬಲ ಸಿಗಲು ಸಾಧ್ಯವಾಗಿದ್ದು, ಸಾಧನೆ ಮಾಡಲು ಸಾಧ್ಯ ಎಂದರು.

RELATED ARTICLES  ಇಂದಿನ(ದಿ-31/10/2018) ಉತ್ತರಕನ್ನಡ ಜಿಲ್ಲೆಯ ಪ್ರಮುಖ ತಾಲೂಕುಗಳ ಅಡಿಕೆ ಧಾರಣೆ.

ತಮ್ಮ ತಮ್ಮ ಕ್ಷೇತ್ರದಲ್ಲಿ೮ ಯಶಸ್ವಿಗಳಾದ ನಮ್ಮ ಸಮಾಜದ ವ್ಯಕ್ತಿಗಳನ್ನು ಕರೆಸಿ, ಪ್ರತಿತಿಂಗಳು ಈ ರೀತಿಯ ಕಾರ್ಯಕ್ರಮ ಆಯೋಜಿಸಲು ಚಿಂತಿಸಲಾಗಿದೆ ಎಂದರು.

ಮೋಹನಭಾಸ್ಕರ ಹೆಗಡೆಯವರು ಮತ್ತು ಸೀತಾ ಕೋಟೆ ರವಿ ಹೆಗಡೆ ಹಾಗೂ ಸತ್ಯಶಂಕರ ಕೆ ಅವರೊಂದಿಗೆ ಸಂವಾದ ನಡೆಸಿಕೊಟ್ಟರು. ಡಾ.ಬಿ ಕೆ ಎಸ್ ವರ್ಮಾ, ರವಿ ಹೆಗಡೆ ಹಾಗೂ ಸತ್ಯಶಂಕರ ಕೆ ಅವರನ್ನು ಹವ್ಯಕ ಮಹಾಸಭೆಯ ವತಿಯಿಂದ ಸನ್ಮಾನಿಸಲಾಯಿತು.

ಕಾರ್ಯಕ್ರಮದ ಆರಂಭದಲ್ಲಿ ಡಾ.ಗ಼ಜಾನನ ಶರ್ಮಾ ಅವರು ರಚಿಸಿದ ಘೋಷ ಗಾನಕ್ಕೆ ಡಾ.ಬಿ ಕೆ ಎಸ್ ವರ್ಮಾ ಅವರು ವಿಜಯ ಧ್ವಜಧಾರಿಯ ಸುಂದರವಾದ ಚಿತ್ರವನ್ನು ಸ್ಥಳದಲ್ಲೇ ರಚಿಸಿದರು. ಸಾಕೇತ ಶರ್ಮಾ, ಪೃಥ್ವಿ ಭಟ್ ಹಾಗೂ ಗುರುಕಿರಣ್ ಹೆಗಡೆ ಘೋಷಗಾನಕ್ಕೆ ಧ್ವನಿಯಾದರು.

ಕಾರ್ಯಕ್ರಮದ ಕೊನೆಯಲ್ಲಿ ವಿದ್ವಾನ್ ಸುಬ್ರಾಯ್ ಭಟ್ ಹಾಗೂ ಪ್ಂಡಿತ ಗುರುಮೂರ್ತಿ ವೈದ್ಯ ಅವರಿಂದ ಸಂತೂರ್ ವಾದನ ಸಭಾಸದರ ಮನರಂಜಿಸಿತು.

ಮಹಾಸಭೆಯ ಪ್ರಧಾನ ಕಾರ್ಯದರ್ಶಿ ಸಿಎ ವೇಣುವಿಘ್ನೇಶ್ ಸಂಪ ಸ್ವಾಗತಿಸಿದರು, ಉಪಾದ್ಯಕ್ಷ ಶ್ರೀಧರ್ ಭಟ್ ಕೆಕ್ಕಾರು, ಕಾರ್ಯದರ್ಶಿಗಳಾದ ಪ್ರಶಾಂತ್ ಭಟ್ ಯಲ್ಲಾಪುರ, ಸಾಲೆಕೊಪ್ಪ ಶ್ರೀಧರ್ ಭಟ್ ಕಾರ್ಯಕ್ರಮದಲ್ಲಿ ಉಪಸ್ತಿತರಿದ್ದರು.