ಯಲ್ಲಾಪುರ: ತಾಲೂಕಿನ ಮಾವಳ್ಳಿ ಕ್ರಾಸ್ ಬಳಿ ಬಳ್ಳಾರಿ-ಕಾರವಾರ ರಾಷ್ಟ್ರೀಯ ಹೆದ್ದಾರಿಯಲ್ಲಿ ಯಲ್ಲಾಪುರದಿಂದ ಹುಬ್ಬಳ್ಳಿ ಕಡೆಗೆ ಹೊರಟಿದ್ದ ಕೆ.ಎಸ್.ಆರ್.ಟಿ.ಸಿ ಬಸ್ ಹಾಗೂ ಗುಜರಾತ್‌ನಿಂದ ಪುತ್ತೂರಿಗೆ ಹೊರಟಿದ್ದ ಕಾರ್ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದೆ. ಅದೃಷ್ಟವಶಾತ್ ಯಾವುದೆ ಪ್ರಾಣಾಪಾಯವಾಗಿಲ್ಲ. ಡಿಕ್ಕಿಯ ರಭಸಕ್ಕೆ ಕಾರಿನ ಮುಂಭಾಗ ಜಖಂ ಆಗಿದೆ.
ಅಪಘಾತದ ರಭಸವನ್ನು ಕಂಡ ಸ್ಥಳೀಯರು ಕೆಲಕಾಲ ಗೊಂದಲಕ್ಕೆ ಒಳಗಾಗಿದ್ದರು. ಕಾರಿನಲ್ಲಿದ್ದ ತಂದೆ ಮಗನ ಪವಾಡ ಸದೃಶ ರೀತಿಯಲ್ಲಿ ಅಪಾಯದಿಂದ ಪಾರಾಗಿದ್ದಾರೆ. ಸ್ಥಳಕ್ಕೆ ಭೇಟಿನೀಡಿದ ಪೊಲೀಸರು ಮುಂದಿನ ಪ್ರಕ್ರಿಯೆ ಕೈಗೊಂಡಿದ್ದಾರೆ.
ಬಸ್ ಲಾರಿ ಅಪಘಾತ
ಪಟ್ಟಣದ ಗಾಂಧಿ ಚೌಕದಲ್ಲಿ ಪ್ರಯಾಣಿಕರನ್ನು ಇಳಿಸುತಿದ್ದ ಕೆಎಸ್‌ಆರ್‌ಟಿಸಿ ಬಸ್ಸಿಗೆ ಲಾರಿಯೊಂದು ಡಿಕ್ಕಿ ಹೊಡೆದ ಘಟನೆ ನಡೆದಿದೆ. ಅಂಕೊಲಾ ಕಡೆಯಿಂದ ಯಲ್ಲಾಪುರ ಕಡೆಗೆ ಬರುತ್ತಿದ್ದ ಲಾರಿಯೊಂದು ರಸ್ತೆ ಬದಿ ನಿಲ್ಲಿಸಿ ಪ್ರಯಾಣಿಕರನ್ನು ಇಳಿಸುತ್ತಿದ್ದ ನಿಂತ ಬಸ್ಸಿಗೆ ಗುದ್ದಿದೆ.
ಘಟನೆಯಲ್ಲಿ ನಿರ್ವಾಹಕ ಸೇರಿದಂತೆ ಮೂವರಿಗೆ ಗಾಯವಾಗಿದೆ. ಆಸ್ಪತ್ರೆಯಲ್ಲಿ ಕೆಲಸಮಾಡುತ್ತಿದ್ದ ಮಹಿಳೆಯೊಬ್ಬಳಿಗೆ ತೀವ್ರ ಗಾಯವಾಗಿದೆ. ಆಸ್ಪತ್ರೆಗೆ ದಾಖಲಿಸಲಾಗಿದೆ.