ಶಿರಾಳಕೊಪ್ಪದಲ್ಲಿ 160ಕ್ಕೂ ಹೆಚ್ಚು ಗೋವುಗಳನ್ನು ಅಕ್ರಮವಾಗಿ ಸಾಗಿಸುತ್ತಿದ್ದ ತಂಡವನ್ನು ತಡೆದು ಪ್ರಶ್ನಿಸಿದ ಗೋಸಂರಕ್ಷಕರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿರುವುದನ್ನು ಭಾರತೀಯ ಗೋ ಪರಿವಾರದ ಕರ್ನಾಟಕ ರಾಜ್ಯ ಘಟಕ ತೀವ್ರವಾಗಿ ಖಂಡಿಸಿದೆ.
ಅಕ್ರಮ ಗೋಸಾಗಾಟವನ್ನು ಪತ್ತೆ ಮಾಡಿ ಪ್ರಶ್ನಿಸಿದಾಗ, ದುಷ್ಕರ್ಮಿಗಳು ದೂರವಾಣಿ ಕರೆ ಮಾಡಿ 15 ಮಂದಿಯನ್ನು ಕರೆಸಿ, ಗೋರಕ್ಷಕರ ಮೇಲೆ ಹಲ್ಲೆ ನಡೆಸಿದ್ದಾರೆ. ಐದು ಮಂದಿಯ ಪೈಕಿ ಮೂವರು ಹಲ್ಲೆಕೋರರಿಂದ ಪಾರಾಗಿದ್ದು, ಇತರ ಇಬ್ಬರನ್ನು ಹಲ್ಲೆಕೋರರು ಅಜ್ಞಾತ ಸ್ಥಳಕ್ಕೆ ಕರೆದೊಯ್ದು ಮಾರಣಾಂತಿಕವಾಗಿ ಹಲ್ಲೆ ಮಾಡಿ ಪರಾರಿಯಾಗಿದ್ದಾರೆ.
ಈ ಬಗ್ಗೆ ತಕ್ಷಣ ಪೊಲೀಸರಿಗೆ ದೂರು ನೀಡಲಾಗಿದ್ದು, ಗಾಯಾಳುಗಳು ಚಿಕಿತ್ಸೆ ಪಡೆಯುತ್ತಿದ್ದಾರೆ. ಶಿರಾಳಕೊಪ್ಪದಿಂದ ಹಿರೇಕೆರೂರಿಗೆ ಕಂಟೈನರ್‌ನಲ್ಲಿ ಗೋವುಗಳನ್ನು ಸಾಗಿಸಲಾಗುತ್ತಿತ್ತು, ಶಿರಾಳಕೊಪ್ಪದಿಂದ ಸುಮಾರು 10 ಕಿಲೋಮೀಟರ್ ದೂರದಲ್ಲಿ ಲಾರಿಯಲ್ಲಿ ಗೋವುಗಳನ್ನು ಸಾಗಿಸುತ್ತಿದ್ದುದನ್ನು ಪ್ರಶ್ನಿಸಿದಾಗ, ಈ ಘಟನೆ ನಡೆದಿದೆ.
ಹೆಚ್ಚುವರಿ ಪೊಲೀಸ್ ಅಧೀಕ್ಷಕ ಮುತ್ತುರಾಜ್ ಮಾರ್ಗದರ್ಶನದಲ್ಲಿ ತನಿಖೆ ನಡೆಯುತ್ತಿದ್ದು, ಸಿಸಿ ಟಿವಿ ದೃಶ್ಯಾವಳಿಯಲ್ಲಿ ಲಾರಿಯ ದೃಶ್ಯಗಳ ಪತ್ತೆಯಾಗಿವೆ ಎಂದು ತಿಳಿದು ಬಂದಿದೆ. ಹಲ್ಲೆ ಖಂಡಿಸಿ ಈಗಾಗಲೇ ರಾಜ್ಯದ ವಿವಿಧೆಡೆಗಳಲ್ಲಿ ಪ್ರತಿಭಟನೆ ನಡೆಯುತ್ತಿದ್ದು, ಆರೋಪಿಗಳನ್ನು ಪತ್ತೆ ಹಚ್ಚಿ ಕಟ್ಟುನಿಟ್ಟಿನ ಶಿಕ್ಷೆ ವಿಧಿಸಬೇಕು ಎಂದು ಭಾರತೀಯ ಗೋ ಪರಿವಾರ ಕರ್ನಾಟಕದ ಅಧ್ಯಕ್ಷ ಪಾಂಡುರಂಗ ಮಹಾರಾಜ್ ಮತ್ತು ಪ್ರಧಾನ ಕಾರ್ಯದರ್ಶಿ ಡಾ.ವೈ.ವಿ.ಕೃಷ್ಣಮೂರ್ತಿ ಆಗ್ರಹಿಸಿದ್ದಾರೆ.
ಗೋಸಂರಕ್ಷಕರ ಮೇಲೆ ವಿವಿಧೆಡೆ ಇಂಥ ಹಲ್ಲೆಗಳು ನಡೆಯುತ್ತಿದ್ದು, ಇದನ್ನು ತಡೆಯಲು ಪೊಲೀಸ್ ಇಲಾಖೆ ಕ್ರಮ ಕೈಗೊಳ್ಳಬೇಕು ಮತ್ತು ದೇಶದಲ್ಲಿ ಗೋಸಂರಕ್ಷಣೆಯ ಸಂವಿಧಾನಬದ್ಧತೆಯನ್ನು ಸರ್ಕಾರ ಎತ್ತಿಹಿಡಿಯಬೇಕು ಎಂದು ಆಗ್ರಹಿಸಿದ್ದಾರೆ.