ಹೊನ್ನಾವರ : ಇಲ್ಲಿನ ಪ್ರತಿಷ್ಠಿತ ವಿದ್ಯಾ ಸಮೂಹ ಸಂಸ್ಥೆಗಳ ಆಡಳಿತ ಮಂಡಳಿ ಯಾದ ಎಂ.ಪಿ.ಇ ಸೊಸೈಟಿಯ ನೂತನ ಅಧ್ಯಕ್ಷರಾಗಿ ಖ್ಯಾತ ಪುಸ್ತಕೋದ್ಯಮಿ ಹಾಗೂ ಶಿಕ್ಷಣಪ್ರೇಮಿ ಕೃಷ್ಣಮೂರ್ತಿ ಭಟ್ಟ ಶಿವಾನಿ ಅವರು ಇತ್ತೀಚೆಗೆ ನಡೆದ ಎಂಪಿಇ ಸೊಸೈಟಿಯ ಆಡಳಿತ ಮಂಡಳಿಯ ವಿಶೇಷ ಸರ್ವಸದಸ್ಯರ ಸಭೆಯಲ್ಲಿ ಸರ್ವಾನುಮತದಿಂದ ಆಯ್ಕೆಯಾಗಿದ್ದಾರೆ.

ಡಾ.ಎಂ.ಪಿ. ಕರ್ಕಿ ಅವರ ವಯೋಸಹಜ ಮರಣದ ನಂತರ ತೆರವಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ಪ್ರಸ್ತುತ ಉಪಾಧ್ಯಕ್ಷರಾಗಿ ನಿಸ್ಪೃಹ ಸೇವೆ ಸಲ್ಲಿಸುತ್ತಿದ್ದ ಕೃಷ್ಣಮೂರ್ತಿ ಭಟ್ಟ ಅವರನ್ನು ಸಭೆಯು ಅಧ್ಯಕ್ಷರನ್ನಾಗಿ ಅವಿರೋಧವಾಗಿ ಆಯ್ಕೆಮಾಡಿತು. ಹೊನ್ನಾವರ ತಾಲೂಕಿನ ಖರ್ವಾ ಗ್ರಾಮದ ಕೊಡ್ಲಮನೆ ಕುಟುಂಬದ ರಾಮಚಂದ್ರ ಭಟ್ಟ, ಸುಬ್ಬಮ್ಮರ ಮಗನಾಗಿ ರೈತ ಕುಟುಂಬದಲ್ಲಿ ಜನಿಸಿದ ಕೃಷ್ಣಮೂರ್ತಿ ಭಟ್ಟ ಅವರು 1994 ರಲ್ಲಿ ಎಸ್.ಡಿ.ಎಂ. ಕಾಲೇಜಿನಲ್ಲೇ ಬಿ.ಎಸ್ಸಿ. ಪದವಿ ಪಡೆದು, ಹೊನ್ನಾವರದಲ್ಲಿಯೇ ಶಿವಾನಿ ಪುಸ್ತಕ ಮಳಿಗೆ ತೆರೆದು ವೃತ್ತಿ ಜೀವನವನ್ನು ಆರಂಭಿಸಿದರು. ಇಂದು ಶಿವಾನಿ ಟ್ರೇಡ್ ಕಾರ್ಪೋರೇಷನ್ ಹೆಸರಿನಲ್ಲಿ ಪುಸ್ತಕ ಮಳಿಗೆ, ಮುದ್ರಣಾಲಯ ಹಾಗೂ ಪರಿಕರಗಳ ವ್ಯಾಪಾರದಲ್ಲಿ ಜಿಲ್ಲೆಯಾದ್ಯಂತ ಪ್ರಸಿದ್ಧಿ ಪಡೆದಿದ್ದಾರೆ.

RELATED ARTICLES  ಗಗನಕ್ಕೇರಿದ ತರಕಾರಿ ಬೆಲೆ: ಟೊಮೆಟೋ, ಕ್ಯಾರೆಟ್ ಬೆಲೆಗೆ ಕಂಗಾಲಾದ ಗ್ರಾಹಕರು

ವಿವಿಧ ಸಾಮಾಜಿಕ ಸೇವೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ಕೃಷ್ಣಮೂರ್ತಿ ಭಟ್ಟ ಶಿವಾನಿ ಅವರು ಶ್ರೀ ಸಿದ್ಧಿವಿನಾಯಕ ವಿದ್ಯಾ ಪ್ರಸಾರ ಮಂಡಳಿ ಕೊಳಗದ್ದೆಯ ಕಾರ್ಯ ನಿರ್ವಾಹಕ ನಿರ್ದೇಶಕರಾಗಿ, ಇದೇ ಸಂಸ್ಥೆಯಲ್ಲಿ ಆಂಗ್ಲಮಾಧ್ಯಮ ಶಾಲೆಯ ಸಂಸ್ಥಾಪಕರಾಗಿ ಅನೇಕ ವರ್ಷ ಗಳಿಂದ ಸೇವೆ ಸಲ್ಲಿಸುತ್ತ ಬಂದಿದ್ದಾರೆ. ಹೊನ್ನಾವರದ ಲಯನ್ಸ ಕ್ಲಬ್‌ನ ಅಧ್ಯಕ್ಷರಾಗಿ, ರೀಜನಲ್ ಚೇರ್ಮನ್ ಆಗಿ ಈ ಹಿಂದೆ ಸೇವೆ ಸಲ್ಲಿಸಿದ್ದ ಅವರು ಹೊನ್ನಾವರ ತಾಲೂಕಿನ ಸೌಟ್, ಗೈಡ್ಸ್ ಅಧ್ಯಕ್ಷರಾಗಿಯೂ ಸೇವೆಯಲ್ಲಿ ನಿರತರಾಗಿದ್ದಾರೆ. ಅಲ್ಲದೇ ಅಖಿಲ ಹವ್ಯಕ ಮಹಾಸಭಾ ಬೆಂಗಳೂರಿನ ನಿರ್ದೇಶಕರಾಗಿಯೂ ಕಾರ್ಯ ನಿರ್ವಹಿಸುತ್ತಿದ್ದಾರೆ.

RELATED ARTICLES  ಉತ್ತರಕನ್ನಡ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಹಾಗೂ ಯುವ ಪುರಸ್ಕಾರ ಪ್ರಕಟ