ಶಿರಸಿ: ವೃತ್ತಿಯಲ್ಲಿ ಯಶಸ್ಸುಗೊಳಿಸಿಕೊಳ್ಳುವ ದಿಶೆಯಲ್ಲಿ ಕಿರಿಯ ವಕೀಲರು ಏಕಾಗ್ರತೆ ಮತ್ತು ವಿಷಯದ ಮೇಲೆ ಅಧ್ಯಯನದ ಕಡೆಗೆ ಹೆಚ್ಚಿನ ಲಕ್ಷ್ಯ ವಹಿಸಬೇಕು. ಈ ದಿಶೆಯಲ್ಲಿ ಕಿರಿಯ ವಕೀಲರಿಗೆ ಜ್ಞಾನ ಕೊಡುವಲ್ಲಿ ಹಿರಿಯ ವಕೀಲರು ಮಾರ್ಗದರ್ಶಕರಾಗಬೇಕೆಂದು 1ನೇ ಹೆಚ್ಚುವರಿ ಸಿವಿಲ್ ನ್ಯಾಯಾಧೀಶ ಶಮೀರ ಪಿ. ನಂದ್ಯಾಳ ಹೇಳಿದರು.
ಕಳೆದ 3 ವರ್ಷದ ಅವಧಿಯಲ್ಲಿ ಸ್ಥಳೀಯ ನ್ಯಾಯಾಲಯದಲ್ಲಿ ಕಾರ್ಯ ನಿರ್ವಹಿಸಿ ಚಿತ್ರದುರ್ಗಕ್ಕೆ ವರ್ಗಾವಣೆ ಹೊಂದಿರುವಂಥ ಸಂದರ್ಭದಲ್ಲಿ ಸ್ಥಳೀಯ ವಕೀಲ ಸಂಘದ ಸಭಾಂಗಣದಲ್ಲಿ ಅವರು ಇಂದು ಜರುಗಿದ ಬೀಳ್ಕೊಡುಗೆ ಸಮಾರಂಭವನ್ನು ಉದ್ದೇಶಿಸಿ ಮಾತನಾಡುತ್ತಿದ್ದರು. ಶಿರಸಿ ವಕೀಲರ ಸಂಘವು ಬುದ್ಧಿವಂತ ವಕೀಲರಿಂದ ಕೂಡಿದ್ದು ಉತ್ತಮ ನಿರ್ಣಯ ನೀಡಲು ಸಹಕಾರವಾಗಿದೆ. ಉತ್ತಮ ಕಾರ್ಯನಿರ್ವಹಿಸುವಲ್ಲಿ ವಕೀಲರ ಸಹಕಾರ ಪ್ರಶಂಸನಾರ್ಹ. ವಕೀಲರು ನ್ಯಾಯಾಲಯದ ಕಲಾಪದ ಜೊತೆಯಲ್ಲಿ ಕಾನೂನು ಸೇವಾ ಪ್ರಾಧಿಕಾರದ ಕಾರ್ಯಚಟುವಟಿಕೆಯಲ್ಲಿ ಹೆಚ್ಚಿನ ಆಸಕ್ತಿಯಿಂದ ಭಾಗವಹಿಸುವಿಕೆಯು ಕಾನೂನು ಸಾಕ್ಷರತಾ ಶಿಬಿರದ ಯಶಸ್ಸಿಗೆ ಕಾರಣವಾಗಿದೆ ಎಂದು ಹೇಳೀದರು.
ಕಾರ್ಯಕ್ರಮದಲ್ಲಿ ವಿಶೇಷ ಆಮಂತ್ರಿತರಾಗಿ 2ನೇ ಹೆಚ್ಚುವರಿ ಸಿವಿಲ್ ನ್ಯಾಯಾಧೀಶ ನರೇಂದ್ರ ಬಿ.ಆರ್. ಉಪಸ್ಥಿತರಿದ್ದರು.
ಅಧ್ಯಕ್ಷತೆಯನ್ನು ವಕೀಲರ ಸಂಘದ ಅಧ್ಯಕ್ಷ ಎ.ರವೀಂದ್ರ ನಾಯ್ಕ ವಹಿಸಿದ್ದರು. ವೇದಿಕೆಯ ಮೇಲೆ ಹಿರಿಯ ವಕೀಲ ಜೆ.ಎಂ.ಹೊನ್ನಾವರ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಹಿರಿಯ ವಕೀಲ ಎನ್.ಎಸ್.ಹೆಗಡೆ ಲಿಂಗದಕೋಣ, ಸದಾನಂದ ಎನ್.ನಾಯ್ಕ, ಆರ್.ಎಸ್.ಹೊಸೂರು, ಶಿವರಾಯ ದೇಸಾಯಿ ಎ.ಪಿ.ಪಿ. ಎಸ್.ಎಸ್. ಇನಾಂದಾರ ನ್ಯಾಯಾಧೀಶರ ಕುರಿತು ತಮ್ಮ ಅನಿಸಿಕೆ ಹಂಚಿಕೊಂಡರು. ಕಾರ್ಯಕ್ರಮದ ಸ್ವಾಗತವನ್ನು ಕಾರ್ಯದರ್ಶಿ ಆರ್.ಆರ್.ಹೆಗಡೆ ಮಾಡಿದರು. ನಿರೂಪಣೆ ಮತ್ತು ವಂದನಾರ್ಪಣೆ ವಕೀಲ ಶ್ಯಾಮಸುಂದರ ಹೆಗಡೆ ಮಾಡಿದರು.