ಕುಮಟಾ: ಆಹಾರ ಅರಸಿ ಬಂದಿದ್ದ ಹಂದಿಯೊಂದು ಆಯತಪ್ಪಿ ಬಾವಿಗೆ ಬಿದ್ದು ಏಳೆಂಟು ಗಂಟೆಗಳ ಕಾಲ ಜೀವ ಉಳಿಸಿಕೊಳ್ಳಲು ಹೋರಾಡಿ, ತದನಂತರ ಅರಣ್ಯ ಅಧಿಕಾರಿಗಳ ನೆರವಿಂದ ಬದುಕಿ ನಿಟ್ಟುಸಿರು ಬಿಟ್ಟ ಘಟನೆ ತಾಲೂಕಿನ ಗುಡ್ಕಾಗಾಲ ಬಳಿ ನಡೆದಿದೆ.
ಬಲೀಂದ್ರ ಹರಿಕಂತ್ರ ಎನ್ನುವವರ ಮನೆಯಲ್ಲಿ ಶುಕ್ರವಾರ ರಾತ್ರಿ 20 ಅಡಿ ತೆರೆದ ಬಾವಿಯಲ್ಲಿ ಆಯತಪ್ಪಿ ಬಿದ್ದ ಹಂದಿ, ಮೇಲೆ ಬರಲಾರದೆ ನರಳಿತು. ಸುಮಾರು 16 ಅಡಿಗಳಷ್ಟು ನೀರಿರುವ ಬಾವಿಯಲ್ಲಿ ಪ್ರಾಣ ಉಳಿಸಿಕೊಳ್ಳಲು ರಾತ್ರಿಯಿಡೀ ಒದ್ದಾಡಿದೆ. ಬೆಳಗಿನ ಜಾವ ಇಲ್ಲಿನ ನಿವಾಸಿಗಳ ಗಮನಕ್ಕೆ ಬಂದು ಕೂಡಲೇ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ತಕ್ಷಣ ಸ್ಥಳಕ್ಕೆ ಬಂದ ಉಪವಲಯ ಅರಣ್ಯಾಧಿಕಾರಿಗಳಾದ ರಾಘವೇಂದ್ರ ನಾಯ್ಕ, ಹೂವಣ್ಣ ಗೌಡ, ಅರಣ್ಯ ರಕ್ಷಕ ಪ್ರಮೋದ್ ಪಟಗಾರ, ಉರಗ ತಜ್ಞ ಪವನ ನಾಯ್ಕ, ಸುರೇಶ ನಾಯ್ಕ, ಬಿರಾ ಗೌಡ, ಗಜಾನನ ಗೌಡ ಮುಂತಾದವರು ಸ್ಥಳೀಯರ ಸಹಕಾರದಿಂದ ಕಾರ್ಯಾಚರಣೆ ನಡೆಸಿ ಹಂದಿಯನ್ನು ರಕ್ಷಿಸಿ ಅರಣ್ಯಕ್ಕೆ ಬಿಟ್ಟಿದ್ದಾರೆ.