ಹೊನ್ನಾವರ: ತಾಲೂಕಿನಾದ್ಯಂತ ಬಿಡದೆ ಸುರಿಯುತ್ತಿರುವ ಮಳೆ ಉತ್ಥಾನ ದ್ವಾದಶಿಯ ಹಬ್ಬದ ಕಳೆಯನ್ನು ಕಸಿದುಕೊಡಿದೆ. ದಿನ್ನೇರಿ ಬಹಳ ವಿಶೇಷವಾಗಿ ಹಾಗೂ ಅನೇಕ ಕಡೆಗಳಲ್ಲಿ ಅದ್ದೂರಿಯಾಗಿ ಹಬ್ಬ ಆಚರಣೆ ಮಾಡಲಾಗುತ್ತಿತ್ತು, ಆದರೆ ಎಡಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಹಬ್ಬ ಕಳೆಗುಂದಿದೆ. ಹಬ್ಬದ ಕುರಿತಾಗಿ ವ್ಯಾಪಾರಕ್ಕಾಗಿ ಬಂದ ಬೇರೆ ಜಿಲ್ಲೆಯ ಹೂವು ಹಾಗೂ ಕಬ್ಬಿನ ವ್ಯಾಪಾರಿಗಳಿಗೆ ನಿರಾಸೆ ಮೂಡಿಸಿದೆ.
ತುಳಸಿ ಹಬ್ಬದ ನಿಮಿತ್ತ ಪರ ಜಿಲ್ಲೆಯಿಂದ ಇಲ್ಲಿಗೆ ಹೂವು ಹಾಗೂ ಕಬ್ಬಿನ ವ್ಯಾಪಾರಿಗಳಿಗೆ ವರುಣ ತಣ್ಣೀರು ಎರೆಚಿದ್ದಾನೆ. ಕಳೆದ ನಾಲ್ಕೈದು ದಿನಗಳಿಂದ ಬಿಟ್ಟು ಬಿಟ್ಟು ಸುರಿಯುತ್ತಿರುವ ಮಳೆಯಿಂದ ಹಬ್ಬದ ಕಳೆ ಗುಂದಿದೆ. ಮಳೆಗೆ ಗ್ರಾಹಕರು ಮನೆಯಿಂದ ಹೊರಗೆ ಬರುತ್ತಿಲ್ಲ. ಇತ್ತ ಗ್ರಾಹಕರಿಲ್ಲದೆ ವ್ಯಾಪಾರಿಗಳು ತಲೆಯ ಮೇಲೆ ಕೈ ಹೊತ್ತು ಕುಳಿತಿದ್ದಾರೆ.
ತಾವು ತಂದಿರುವ ಹೂವುಗಳನ್ನು ವಾಪಸ್ ಒಯ್ಯಲೂ ಆಗದೆ ಮಾರಾಟ ಮಾಡಲಾಗದೆ ವ್ಯಾಪಾರಿಗಳು ಪರದಾಡುವಂತಾಗಿದೆ. ಮಳೆಯಿಂದ ಹೂವುಗಳು ಹಾಳಾಗುತ್ತಿದೆ. ಒಟ್ಟಿನಲ್ಲಿ ವರುಣ ಹಬ್ಬದ ಸಡಗರಕ್ಕೆ ಅಡ್ಡಿ ಪಡಿಸಿದ್ದಲ್ಲದೆ ಬಡ ವ್ಯಾಪಾರಿಗಳಿಗೂ ನಿರಾಸೆಗೆ ಕಾರಣನಾಗಿದ್ದಾನೆ. ಈ ವರ್ಷ ಅಕಾಲಿಕ ಮಳೆಯಿಂದಾಗಿ ರೈತರು ಸಹ ಬೆಳೆಗಳನ್ನು ಕಳೆದುಕೊಳ್ಳುವ ಆತಂಕದಲ್ಲಿದ್ದಾರೆ. ಹಬ್ಬ ಆಚರಣೆ ಒಂದೆಡೆಯಾದರೆ ಇನ್ನೊಂದೆಡೆ ರೈತರ ಬದುಕು ಕಷ್ಟದಲ್ಲಿದೆ.