ಸಿದ್ದಾಪುರ: ಯಕ್ಷಗಾನ ತಾಳಮದ್ದಳೆ ಅರ್ಥಧಾರಿ ಹಾಗೂ ಸಂಸ್ಕೃತ ವಿದ್ವಾಂಸ ಉಮಾಕಾಂತ ಭಟ್ಟ ಕೆರೆಕೈ ಇವರಿಗೆ ಯಕ್ಷಗಾನ ಕಲಾಪೋಷಕ, ತಾಳಮದ್ದಳೆ ಅರ್ಥಧಾರಿ ದಿ.ಅಳಗೋಡು ತಿಮ್ಮಣ್ಣ ಹೆಗಡೆಯವರ ಸ್ಮರಣೆಯ ಸನ್ಮಾವನ್ನು ನೀಡಿ ಗೌರವಿಸಲಾಯಿತು. ತಾಲೂಕಿನ ಗುಂಜಗೋಡು ಗಣಪತಿ ನಾರಾಯಣ ಹೆಗಡೆಯವರ ಮನೆಯಲ್ಲಿ ಮೋಹಿನಿ ಏಕಾದಶಿಯಂದು ಭುವನೇಶ್ವರಿ ತಾಳಮದ್ದಳೆ ಕೂಟದ ವತಿಯಿಂದ ತಾಳಮದ್ದಳೆ ಮತ್ತು ಸನ್ಮಾನ ಕಾರ್ಯಕ್ರಮ ಹಾಗೂ ಸನ್ಮಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.ಈ ಸಂದರ್ಭದಲ್ಲಿ ಮನೆಯ ಯಜಮಾನರಾದ ಗಣಪತಿ ಹೆಗಡೆ ಮತ್ತು ಅವರ ಪತ್ನಿ ಪ್ರವೀಣಾ ಸನ್ಮಾನ ನೆರವೇರಿಸಿದರು.
ಸನ್ಮಾನ ಸ್ವೀಕರಿಸಿದ ವಿ.ಉಮಾಕಾಂತ ಭಟ್ಟ ಮಾತನಾಡಿ ಭುವನೇಶ್ವರಿ ತಾಳಮದ್ದಳೆ ಕೂಟ ನೀಡುತ್ತಿರುವ ಈ ಸನ್ಮಾನ ಪ್ರೀತಿ ಮತ್ತು ಕಲಾ ಸೇವೆಯ ದ್ಯೋತಕ. ಭುವನೇಶ್ವರಿ ತಾಳಮದ್ದಳೆ ಕೂಟದ ಸಂಘಟಕರು ಮತ್ತು ಕಲಾವಿದರು ಕಳೆದ ಮೂವತ್ಮೂರು ವರ್ಷಗಳಿಂದ ಈ ಕೂಟವನ್ನು ನಡೆಸಿಕೊಂಡು ಬಂದಿದ್ದು ಇದರೊಂದಿಗೆ ನನ್ನ ಒಡನಾಟ ಆಪ್ತವಾಗಿದೆ ಎಂದರು.
ವಿ.ಶೇಷಗಿರಿ ಭಟ್ಟ ಅಭಿನಂದನಾ ಮಾತುಗಳನ್ನಾಡಿದರು.ಅಧ್ಯಕ್ಷತೆ ವಹಿಸಿದ್ದ ಡಾ. ಶಶಿಭೂಷಣ ಹೆಗಡೆ ಮಾತನಾಡಿ ಉಮಾಕಾಂತ ಭಟ್ಟರ ಸಾಧನೆ, ಸಮಾಜದ ಸಾಂಸ್ಕೃತಿಕ ಬೆಳವಣಿಗೆಗೆ ಯಕ್ಷಗಾನದ ಕೊಡುಗೆ ಮುಂತಾದ ವಿಷಯಗಳನ್ನು ನೆನಪಿಸಿದರು.
ಹಿರಿಯರಾದ ವಿ.ಎಸ್. ಹೆಗಡೆ ಸಾತಿನಕೇರಿ ಅತಿಥಿ ಸ್ಥಾನದಿಂದ ಮಾತನಾಡಿದರು. ಗಣಪತಿ ಗುಂಜಗೋಡ ಸ್ವಾಗತಿಸಿದರು. ಜೈರಾಮ ಭಟ್ಟ ಗುಂಜಗೋಡ ವಂದಿಸಿದರು. ಜಿ.ಕೆ.ಭಟ್ಟ ಕಶಿಗೆ ನಿರೂಪಿಸಿದರು. ನಂತರ ಭಕ್ತ ಮಯೂರಧ್ವಜ ಎಂಬ ಆಖ್ಯಾನದ ತಾಳಮದ್ದಳೆ ನಡೆಯಿತು. ಭಾಗವತರಾಗಿ ಕೇಶವ ಹೆಗಡೆ ಕೊಳಗಿ, ಮಾಧವ ಭಟ್ಟ ಕೊಳಗಿ,ಮದ್ದಳೆವಾದಕರಾಗಿ ಮಂಜುನಾಥ ಹೆಗಡೆ ಕಂಚಿಮನೆ ಉತ್ತಮ ಹಿಮ್ಮೇಳ ಒದಗಿಸಿದರು. ಪಾತ್ರಧಾರಿಗಳಾಗಿ ವಿ.ಉಮಾಕಾಂತ ಭಟ್ಟ, ರಾಧಾಕೃಷ್ಣ ಕಲ್ಚಾರ್, ಮಂಜುನಾಥ ಗೊರಮನೆ, ಜಿ.ಕೆ.ಭಟ್ಟ ಕಶಿಗೆ, ಕು. ವಿನೀತ ಹೆಗಡೆ ಗುಂಜಗೋಡ ಆಖ್ಯಾನಕ್ಕೆ ಜೀವ ತುಂಬಿದರು.