ಹೊನ್ನಾವರ: ಉದ್ಯೋಗ ಕೊಡಿಸುವುದಾಗಿ ನಂಬಿಸಿ ಜನರನ್ನು ದಾರಿತಪ್ಪಿಸುವುದು ಹಾಗೂ ಜನರಿಗೆ ಮೋಸ ಮಾಡುವಂತಹ ಜಾಲ ಆಗಾಗ ಬೆಳಕಿಗೆ ಬರುತ್ತಲೇ ಇರುತ್ತದೆ. ಅಂತಹುದೇ ಪ್ರಕರಣವೊಂದು ಹೊನ್ನಾವರದಲ್ಲಿ ಇದೀಗ ಬೆಳಕಿಗೆ ಬಂದಿದೆ. ಯುವಕನೊಬ್ಬನಿಗೆ ರೈಲ್ವೆ ಇಲಾಖೆಯಲ್ಲಿ ಉದ್ಯೋಗ ಕೊಡಿಸುವುದಾಗಿ ನಂಬಿಸಿ ಬರೋಬ್ಬರಿ 3 ಲಕ್ಷ ರೂ. ಹಣವನ್ನು ಯೆಗರಿಸಿ ಉದ್ಯೋಗವೂ ಇಲ್ಲ, ಇತ್ತ ಹಣವೂ ಇಲ್ಲದೆ ಯುವಕನಿಗೆ ವಂಚಿಸಿರುವ ಘಟನೆ ತಾಲೂಕಿನ ಕವಲಕ್ಕಿಯಲ್ಲಿ ಬೆಳಕಿಗೆ ಬಂದಿದೆ.
ಮೂಲತಃ ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಮಕ್ಕಿಮನೆ ಬಸ್ರೂರು ಗ್ರಾಮದ ನಿವಾಸಿಯಾದ ರಾಘವೇಂದ್ರ ಗೋವಿಂದ ಪೂಜಾರಿ ಎಂಬಾತ ಕವಲಕ್ಕಿ ಯುವಕನಿಗೆ ವಂಚಿಸಿದ ಆರೋಪಿಯಾಗಿದ್ದಾನೆ. ಈತ ಹೊನ್ನಾವರ ತಾಲೂಕಿನ ಕವಲಕ್ಕಿಯ 23 ವರ್ಷ ವಯಸ್ಸಿನ ಸುಬ್ರಹ್ಮಣ್ಯ ಶ್ರೀಪಾದ ಶೇಟ್ ಎಂಬುವವರಿಗೆ ರೈಲ್ವೆ ಇಲಾಖೆಯಲ್ಲಿ ಜಾಬ್ ಕೊಡಿಸುವುದಾಗಿ ನಂಬಿಸಿ ಲಕ್ಷಗಟ್ಟಲೆ ಹಣವನ್ನು ಪಡೆದಿದ್ದ ಎನ್ನಲಾಗಿದೆ.
ಆರೋಪಿ ರಾಘವೇಂದ್ರ ಗೋವಿಂದ ಪೂಜಾರಿ ಕವಲಕ್ಕಿಯ ಸುಬ್ರಹ್ಮಣ್ಯ ಶ್ರೀಪಾದ ಶೇಟ್ ಅವರ ಮಾವನವರ ಮುಖಾಂತರ 2019 ರಲ್ಲಿ ಪರಿಚಯವಾದವನು, ಸುಬ್ರಹ್ಮಣ್ಯ ಅವರಿಗೆ `ರೈಲ್ವೆ ಇಲಾಖೆಯಲ್ಲಿ ಡ್ರಾಪ್ಟ್ಸ್‍ಮನ್ ಹುದ್ದೆಯನ್ನು ಕೊಡಿಸುತ್ತೇನೆ. ಅದಕ್ಕೆ ಒಟ್ಟೂ 7 ಲಕ್ಷ ರೂ. ಖರ್ಚಾಗುತ್ತದೆ. ಮುಂಗಡವಾಗಿ 3 ಲಕ್ಷ ರೂ. ಹಣವನ್ನು ಕೊಡುವುದು, ನಂತರ ನೌಕರಿ ಸಿಕ್ಕ ಬಗ್ಗೆ ಆರ್ಡರ್ ಲೆಟರ್ ಬಂದ ನಂತರ ಉಳಿದ ಹಣವನ್ನು ಕೊಡುವುದು ಎಂದು ನಂಬಿಸಿದ್ದಾನೆ.
2019 ರಲ್ಲಿ ಸುಬ್ರಹ್ಮಣ್ಯ ಹಾಗೂ ಅವರ ಮನೆಯವರಿಗೆ ನಂಬಿಸಿ ಕವಲಕ್ಕಿಯ ಸುಬ್ರಹ್ಮಣ್ಯ ಶೇಟ್ ಅವರ ಕಡೆಯಿಂದ ಹಾಗೂ ಅವರ ತಾಯಿಯವರಾದ ವಿಜಯ ಶೇಟ್ ಇವರ ಹೆಸರಿನಲ್ಲಿರುವ ಕವಲಕ್ಕಿ ಶಾಖೆಯ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ ಖಾತೆಯಿಂದ ವಂಚಕ ರಾಘವೇಂದ್ರ ಪೂಜಾರಿ ನೀಡಿದ್ದ ಆತನ ಹೆಸರಿಗೆ ಇರುವ ಕುಂದಾಪೂರ ಶಾಖೆಯ ಹೆಚ್.ಡಿ.ಎಫ್.ಸಿ ಬ್ಯಾಂಕ್ ಖಾತೆಗೆ 50 ಸಾವಿರ ರೂ., 80 ಸಾವಿರ ರೂ. ಹಾಗೂ 10 ಸಾವಿರ ರೂ. ಹಣವನ್ನು ನೆಫ್ಟ್ ಮೂಲಕ ವರ್ಗಾಯಿಸಿಕೊಂಡಿದ್ದಾನೆ. ಇದಲ್ಲದೆ 25.05.2019 ರಂದು ಕವಲಕ್ಕಿಯ ಸುಬ್ರಹ್ಮಣ್ಯ ಅವರ ಮನೆಯಲ್ಲಿ ಆರೋಪಿ ರಾಘವೇಂದ್ರ ಪೂಜಾರಿ ಖುದ್ದಾಗಿ ಬಂದು ಸುಬ್ರಹ್ಮಣ್ಯ ಅವರ ತಾಯಿಯವರ ಕಡೆಯಿಂದ 1,60,000 ರೂ. ನಗದು ಹಣವನ್ನು ಪಡೆದಿದ್ದು, ಹೀಗೆ ಒಟ್ಟು 3 ಲಕ್ಷ ರೂ. ಹಣವನ್ನು ಲಪಟಾಯಿಸಿದ್ದಾನೆ ಎಂದು ಕವಲಕ್ಕಿಯ ಸುಬ್ರಹ್ಮಣ್ಯ ಶೇಟ್ ಹೊನ್ನಾವರ ಠಾಣೆಯಲ್ಲಿ ದೂರು ನೀಡಿದ್ದಾರೆ.
ಇನ್ನು ವಂಚನೆಗೊಳಗಾದ ಸುಬ್ರಹ್ಮಣ್ಯ ಅವರಿಗೆ ಈವರೆಗೂ ನೌಕರಿಯನ್ನು ಕೂಡಿಸದೇ 3 ಲಕ್ಷ ರೂ. ಹಣವನ್ನು ಮರಳಿ ನೀಡದೇ ಮೋಸ ಮಾಡಿದ್ದು, ರಾಘವೇಂದ್ರ ಪೂಜಾರಿ ವಿರುದ್ಧ ಹೊನ್ನಾವರ ಠಾಣೆಯಲ್ಲಿ ವಂಚನೆ ಆರೋಪದಡಿ ದೂರು ದಾಖಲಾಗಿದ್ದು, ಹೊನ್ನಾವರ ಪಿಎಸ್‍ಐ ಶಶಿಕುಮಾರ್ ಅವರು ಪ್ರಕರಣ ದಾಖಿಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.