ಉತ್ತರ ಕನ್ನಡ ಜಿಲ್ಲಾ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಚುನಾವಣೆ ನವೆಂಬರ್ 21ರಂದು ನಡೆಯಲಿದ್ದು ಈ ಚುನಾವಣೆಯಲ್ಲಿ ಜಾತಿ ಗುಂಪುಗಾರಿಕೆ ಗಳ ಮೇಲಾಟ ದಿನದಿನವೂ ಹೆಚ್ಚತೊಡಗಿದೆ. ಇವುಗಳ ನಡುವೆ ಅವಾವುದಕ್ಕೂ ಅಂಟಿಕೊಳ್ಳದೆ ಈ ಚುನಾವಣೆಗೆ ನಿಂತ ಸಾಹಿತ್ಯ ಪ್ರೇಮಿಯಾದ ನನಗೆ ಪರಿಷತ್ತಿನಲ್ಲಿ ಇರುವ ಸರ್ವ ಸಮಾಜದ ಸಾಹಿತ್ಯ ಪ್ರೇಮಿಗಳೇ ನನಗೆ ಬೆಂಬಲ ವ್ಯಕ್ತಪಡಿಸಿದ್ದಾರೆ ಎಂದು ಅಧ್ಯಕ್ಷ ಸ್ಥಾನದ ಅಭ್ಯರ್ಥಿ ಕೃಷ್ಣಮೂರ್ತಿ ಹೆಬ್ಬಾರ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಪರಿಷತ್ತಿನಲ್ಲಿ ಇಂದೂ ಕೂಡ ಜಾತ್ಯಾತೀತವಾದ ಗುಣಗ್ರಾಹಿಳಾದ ಮತದಾರರು ಜಿಲ್ಲೆಯ ವಿವಿಧ ತಾಲೂಕಿನಲ್ಲಿ ಇದ್ದಾರೆ. ಅವರೇ ನನಗೆ ಒತ್ತಾಸೆಯಾಗಿ ನಿಂತಿದ್ದಾರೆ. ಆದ್ದರಿಂದ ಭ್ರಷ್ಟಾಚಾರ ಮತ್ತು ಗುಂಪುಗಾರಿಕೆ ಮುಕ್ತವಾದ ಪಾರದರ್ಶಕವಾದ ಕನ್ನಡ ಸಾಹಿತ್ಯ ಪರಿಷತ್ತನ್ನು ಈ ಜಿಲ್ಲೆಯಲ್ಲಿ ಕಟ್ಟಿ ನಿಲ್ಲಿಸುವುದೇ ನನ್ನ ಮುಖ್ಯ ಉದ್ದೇಶ ಎಂದು ಅವರು ಹೇಳಿದರು. ಹೊನ್ನಾವರದಲ್ಲಿ ಇತ್ತೀಚೆಗೆ ಪತ್ರಿಕಾಗೋಷ್ಠಿ ನಡೆಸಿ ಮುಂದುವರೆದು ಮಾತನಾಡಿದ ಅವರು ಪ್ರತಿ ತಾಲೂಕಿನಲ್ಲಿ ಸಾಹಿತ್ಯ ಪರಿಷತ್ತಿಗೆ ಸಾವಿರ ಸದಸ್ಯರನ್ನು ಮಾಡುವುದು, ಅವರಿಂದ ದಿನಕ್ಕೆ ಒಂದು ರೂಪಾಯಿಯಂತೆ ಸಂಗ್ರಹಿಸಿ ಅಮೃತ ನಿಧಿ ಯೋಜನೆ ರೂಪಿಸಿ ಪರಿಷತ್ತನ್ನು ಸ್ವಾವಲಂಬಿಯಾಗಿ ಕಟ್ಟುವುದು ನನ್ನ ಉದ್ದೇಶ. ಅದೇ ರೀತಿ ಉತ್ತರ ಕನ್ನಡ ಜಿಲ್ಲೆಯ ಸಮರ್ಥ ಸಾಹಿತಿಯನ್ನು ಸರತಿಯಲ್ಲಾದರೂ ಅಖಿಲ ಭಾರತ ಸಾಹಿತ್ಯ ಸಮ್ಮೇಳನಕ್ಕೆ ಅಧ್ಯಕ್ಷರಾಗಿ ಆಯ್ಕೆ ಮಾಡಲು ಹೋರಾಟ ಮಾಡುವುದು, ಜಿಲ್ಲೆಯಲ್ಲಿ ಕನ್ನಡದ ಬಳಕೆಯನ್ನು ಹೆಚ್ಚಿಸಲು ಕನ್ನಡಪರ ಸಂಘಟನೆಗಳ ಜೊತೆ ಸೇರಿ ಹೋರಾಟ ಮಾಡುವುದೇ ನನ್ನ ಗುರಿ ಎಂದು ಅವರು ಹೇಳಿದರು. ತಾಲೂಕು ಜಿಲ್ಲಾ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗುವರಿಗೆ ಕನಿಷ್ಠ ಮಾನದಂಡವನ್ನು ರೂಪಿಸಲು ಯತ್ನಿಸುವುದಾಗಿ ಅವರು ತಿಳಿಸಿದರು.

RELATED ARTICLES  ಸಂಪನ್ನವಾಯ್ತು 309ನೇ ದಿನದ "ಗೋಕರ್ಣ ಗೌರವ"