ಶಿರಸಿ : ಅಕಾಲಿಕವಾಗಿ ಸುರಿಯುತ್ತಿರುವ ಭಾರಿ ಮಳೆಯಿಂದ ರೈತರ ಸಮುದಾಯ ಕಂಗಾಲಾಗಿದೆ. ಒಂದೆಡೆ ಬೆಳೆ ಕೈಗೆ ಬಂತು ಎನ್ನುವಷ್ಟರಲ್ಲಿ ಪ್ರಾರಂಭವಾಗಿ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಬೆಳೆಯನ್ನು ಕಳೆದುಕೊಂಡು ರೈತರು ಕಂಗಾಲಾಗಿದ್ದಾರೆ. ಬೆಳೆ ಕಳೆದುಕೊಂಡ ರೈತರ ಬದುಕು ಬರಡಾಗಿದೆ. ಬೆಳೆ ಕಳೆದುಕೊಂಡ ರೈತ ಆತ್ಮಹತ್ಯೆಗೆ ಶರಣಾಗಿದ್ದು ರೈತರ ಬದುಕಿನ ಬವಣೆಯನ್ನು ಬಿಂಬಿಸುವಂತಿದೆ.
ಅಕಾಲಿಕ ಮಳೆಯಿಂದ ತಾನು ಬೆಳೆದಿದ್ದ ಫಸಲು ನಾಶವಾಗಿದ್ದಕ್ಕೆ ಬೇಸರಗೊಂಡ ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲ್ಲೂಕಿನ ನರೂರು ಗ್ರಾಮದ ರೈತರೊಬ್ಬರು ಕೀಟನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಗಂಗಾಧರ ಫಕೀರಣ್ಣ ಶೇಷಣ್ಣನವರ ಆತ್ಮಹತ್ಯೆ ಮಾಡಿಕೊಂಡ ರೈತ ಎನ್ನಲಾಗಿದೆ.
ಕಳೆದ ಒಂದು ತಿಂಗಳಿಂದ ಸುರಿಯುತ್ತಿರುವ ಮಳೆಯಿಂದ ಭತ್ತ, ಶುಂಠಿ ಬೆಳೆ ಹಾನಿಯಾಗಿತ್ತು. ಇದರಿಂದ ಮಾನಸಿಕವಾಗಿ ನೋವನ್ನು ಅನುಭವಿಸುತಿದ್ದ ಈತ ನ.17 ರಂದು ಕೀಟನಾಶಕ ಸೇವಿಸಿದ್ದರು. ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಚಿಕಿತ್ಸೆಗೆ ಸ್ಪಂದಿಸದೇ ಮೃತಪಟ್ಟಿದ್ದಾರೆ. ಘಟನೆ ಸಂಬಂಧ ಬನವಾಸಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅಕಾಲಿಕವಾಗಿ ಸುರಿಯುತ್ತಿರುವ ಮಳೆಯಿಂದಾಗಿ ರೈತರು ಕಂಗಾಲಾಗಿದ್ದು ಸರ್ಕಾರ ಅಗತ್ಯ ಪರಿಹಾರ ಒದಗಿಸಬೇಕು ಹಾಗೂ ರೈತರ ಬೆಂಬಲಕ್ಕೆ ನಿಲ್ಲಬೇಕು ಎನ್ನುವುದು ಸಾರ್ವಜನಿಕರ ಅಭಿಪ್ರಾಯವಾಗಿದೆ.