ಕುಮಟಾ : ಕಳೆದ ಸಾಲಿನ ಎಸ್‍ಎಸ್‍ಎಲ್‍ಸಿ ಮತ್ತು ಪಿಯುಸಿ ಪರೀಕ್ಷೆಗಳಲ್ಲಿ ಸಾಧನೆಗೈದ ವಿದ್ಯಾರ್ಥಿಗಳಿಗಾಗಿ ಪ್ರತಿಭಾ ಪುರಸ್ಕಾರ ಹಾಗೂ ಶಿಕ್ಷಕರಿಗಾಗಿ ಅಭಿನಂದನಾ ಕಾರ್ಯಕ್ರಮವನ್ನು ಇಲ್ಲಿನ ಪ್ರತಿಷ್ಠಿತ ಕೊಂಕಣ ಎಜ್ಯುಕೇಶನ್ ಟ್ರಸ್ಟ್‍ನ ವತಿಯಿಂದ ಇತ್ತೀಚೆಗೆ ಹಮ್ಮಿಕೊಳ್ಳಲಾಗಿತ್ತು. ಶ್ರೀ ರಘುನಂದನ ಜಿ., ಸಂಯೋಜಕರು, ಪ್ರಜ್ಞಾ ಪ್ರವಾಹ ರಾಷ್ಟ್ರೀಯ ಸ್ವಯಂ ಸೇವಕ ಸಂಘ ಇವರು ಕಾರ್ಯಕ್ರಮವನ್ನು ಉದ್ಘಾಟಿಸಿ ರ್ಯಾಂಕ್ ವಿಜೇತರನ್ನು ಸನ್ಮಾನಿಸಿ, ಗುರುವೃಂದವನ್ನು ಅಭಿನಂದಿಸಿದರು. ನಂತರ ಮಾತನಾಡಿದ ಅವರು, ಶಿಕ್ಷಕ ವೃತ್ತಿಯ ಪಾವಿತ್ರ್ಯತೆಯ ಮಹತ್ವವನ್ನು ವಿವರಿಸುತ್ತ, ದೇಶಭಕ್ತಿಯನ್ನು ಬೆಳೆಸಿಕೊಂಡು ದೇಶಸೇವೆಯಲ್ಲಿ ತೊಡಗಿಸಿಕೊಳ್ಳಬೇಕೆಂದು ಕರೆ ನೀಡಿದರು. ಅಧ್ಯಕ್ಷತೆ ವಹಿಸಿ ಮಾತನಾಡಿದ ಟ್ರಸ್ಟಿಗಳಾದ ರಮೇಶ ಪ್ರಭು, ನಿಮ್ಮ ಸಾಧನೆ ಪ್ರಯತ್ನ ನಿರಂತರವಾಗಿರಲಿ ಎಂದು ಶುಭ ಹಾರೈಸಿದರು.


ಶಾಲೆಯ ಹಳೆಯ ವಿದ್ಯಾರ್ಥಿಗಳಾದ ಲಕ್ಷ್ಮೀಶ ಶಾನಭಾಗ, ಲೆಕ್ಕ ಪರಿಶೋಧಕರು ಹಾಗೂ ಸ್ನೇಹಾ ಹೆಗಡೆ, ಪ್ರಾಂತ ಶಾರೀರಿಕ ರಾಷ್ಟ್ರ ಸೇವಿಕಾ ಸಮಿತಿ ಇವರು ವಿದ್ಯಾರ್ಥಿಗಳ ಪ್ರೇರಣಾದಾಯಿಯಾಗಿ ಕಾರ್ಯಕ್ರಮದ ಅತಿಥಿಗಳಾಗಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕೇವಲ ವೃತ್ತಿಗಾಗಿ ಶಿಕ್ಷಣವನ್ನು ಸೀಮಿತವಾಗಿರಿಸದೆ ದೇಶ, ದೇವ ಹಾಗೂ ದೇಹಕ್ಕೆ ಅನ್ವಯವಾಗುವಂತೆ ಅದನ್ನು ಸದುಪಯೋಗಪಡಿಸಿಕೊಳ್ಳಬೇಕೆಂದು ಲಕ್ಷ್ಮೀಶ ಕಿವಿಮಾತು ಹೇಳಿದರು. ಶಾಲೆಯ ಹಳೆಯ ನೆನಪುಗಳನ್ನು ಹಂಚಿಕೊಳ್ಳುತ್ತ, ವಿದ್ಯಾರ್ಥಿಗಳಿಗೆ ತಮ್ಮ ತಮ್ಮ ಸಾಮಥ್ರ್ಯಾನುಸಾರ ಜೀವನದಲ್ಲಿ ಸಾಧನೆಗೈಯುವಂತೆ ಸ್ನೇಹಾ ಹುರಿದುಂಬಿಸಿದರು.
ಈ ಸಂದರ್ಭದಲ್ಲಿ ಪಿಯುಸಿ ಹಾಗೂ ಎಸ್‍ಎಸ್‍ಎಲ್‍ಸಿ ಫಲಿತಾಂಶಗಳ ವಿಶ್ಲೇಷಣೆ ಮಾಡಲಾಯಿತು. ರ್ಯಾಂಕ್ ಗಳಿಸಿದ ವಿದ್ಯಾರ್ಥಿಗಳಿಗೆ ವಿಶಿಷ್ಟವಾಗಿ ಸಿದ್ಧಪಡಿಸಿದ ಕಿರೀಟಗಳನ್ನು ತೊಡಿಸಿ, ಶಾಲು ಹೊದಿಸಿ, ನಗದು ಪುರಸ್ಕಾರ ನೀಡಿ ಗೌರವಿಸಲಾಯಿತು. ಪರೀಕ್ಷೆಯಲ್ಲಿ ಗಮನಾರ್ಹ ಸಾಧನೆ ಮಾಡಿದ ವಿದ್ಯಾರ್ಥಿಗಳೂ ಕೂಡ ನಗದು ಪುರಸ್ಕಾರಕ್ಕೆ ಭಾಜನರಾದರು.

RELATED ARTICLES  ಹಳೆಯ ಪದ್ಧತಿಯಲ್ಲಿಯೇ ಪಡಿತರ ವಿತರಣೆ ಮಾಡುವುದು ಒಳ್ಳೆಯದು.

ಕೊಂಕಣ ಸಮೂಹ ಶಾಲೆಗಳ ಮುಖ್ಯಸ್ಥರಿಗೆ ಶಾಲು ಹೊದಿಸಿ ಸನ್ಮಾನಿಸಲಾಯಿತು. ಟ್ರಸ್ಟಿನ ಗೌರವ ಕಾರ್ಯದರ್ಶಿಗಳಾದ ಮುರಲೀಧರ ಪ್ರಭು, ಟ್ರಸ್ಟಿಗಳಾದ ರಮೇಶ ಪ್ರಭು, ರಾಮನಾಥ ಕಿಣಿ, ಪ್ರಾಚಾರ್ಯ ಮಹೇಶ ಉಪ್ಪಿನ, ಪ್ರೌಢಶಾಲಾ ವಿಭಾಗದ ಸುಮಾ ಪ್ರಭು, ಪ್ರಾಥಮಿಕ ವಿಭಾಗದ ಸುಜಾತಾ ನಾಯ್ಕ, ಬಾಲಮಂದಿರದ ಸಾವಿತ್ರಿ ಹೆಗಡೆ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಶೈಕ್ಷಣಿಕ ಸಲಹೆಗಾರರಾದ ಆರ್. ಎಚ್. ದೇಶಭಂಡಾರಿ, ವಿಧಾತ್ರಿ ಅಕಾಡೆಮಿಯ ಗುರುರಾಜ ಶೆಟ್ಟಿ, ಶಿಕ್ಷಕ ವೃಂದ, ಪಾಲಕರು, ಪ್ರಸಕ್ತ ಶೈಕ್ಷಣಿಕ ಸಾಲಿನ ಎಸ್‍ಎಸ್‍ಎಲ್‍ಸಿ ವಿದ್ಯಾರ್ಥಿಗಳು ಈ ಸಂದರ್ಭದಲ್ಲಿ ಹಾಜರಿದ್ದರು.

RELATED ARTICLES  ದೇಶವನ್ನು ಈವರೆಗೆ ದುರ್ಬಲ ಮಾರ್ಗದಲ್ಲಿ ಸಾಗಿಸಿದ ಕಾಂಗ್ರೆಸ್ ಗೆ ಮಾರ್ಷಲ್ ಭಾಷೆಯಲ್ಲಿ ಉತ್ತರ ನೀಡಬೇಕಾದ ಅನಿವಾರ್ಯತೆಯಿದೆ : ಕೇಂದ್ರ ಸಚಿವ ಅನಂತಕುಮಾರ ಹೆಗಡೆ


ಮುರಲೀಧರ ಪ್ರಭು ಸ್ವಾಗತಿಸಿದರು, ಶಿಕ್ಷಕ ಚಿದಾನಂದ ಭಂಡಾರಿ ಅತಿಥಿಗಳನ್ನು ಪರಿಚಯಿಸಿದರು, ಶಿಕ್ಷಕ ಶಿವಾನಂದ ಭಟ್ಟ ಅಭಿನಂದನಾ ನುಡಿಗಳನ್ನಾಡಿದರು, ಶಿಕ್ಷಕರುಗಳಾದ ಪ್ರಕಾಶ ಗಾವಡಿ ಹಾಗೂ ಅಮಿತಾ ಗೋವೆಕರ್ ನಿರೂಪಿಸಿದರು, ವಿದ್ಯಾರ್ಥಿಗಳಾದ ಸಂಜನಾ, ಭೂಮಿಕಾ ಸಂಗಡಿಗರು ಪ್ರಾರ್ಥಿಸಿದರು. ವಂದೇ ಮಾತರಂ ಗೀತೆಯೊಂದಿಗೆ ಕಾರ್ಯಕ್ರಮ ಸಂಪನ್ನಗೊಂಡಿತು.