ಅಹ್ಮದಾಬಾದ್: ಗುಜರಾತ್ ನ ಅಹ್ಮದಾಬಾದ್ ವಿಮಾನ ನಿಲ್ದಾಣಕ್ಕೆ ಜಪಾನ್ ಪ್ರಧಾನಿ ಶಿಂಜೋ ಅಬೆ ಅವರು ಆಗಮಿಸಿದ್ದು, ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಆತ್ಮೀಯ ಅಪ್ಪುಗೆ ಮೂಲಕ ಶಿಂಜೋ ಅಬೆ ಮತ್ತು ಅವರ  ಪತ್ನಿ ಅಕೀ ಅಬೆ ಅವರನ್ನು ಆತ್ಮೀಯವಾಗಿ ಬರಮಾಡಿಕೊಂಡರು.
ಗುಜರಾತ್‌ನಲ್ಲಿ  ನಡೆಯಲಿರುವ ಭಾರತ-ಜಪಾನ್ ವಾರ್ಷಿಕ ಶೃಂಗಸಭೆ ಅಂಗವಾಗಿ ಇಂದು ಮತ್ತು ನಾಳೆ ಎರಡು ದಿನ ಜಪಾನ್‌ ಪ್ರಧಾನಿ ಶಿಂಜೋ ಅಬೆ ಭಾರತದಲ್ಲೇ ಉಳಿಯಲಿದ್ದಾರೆ. ಭಾರತದಲ್ಲಿ ಜಪಾನ್ ದೇಶದ  ಸಹಯೋಗದೊಂದಿಗೆ ಕೇಂದ್ರ ಸರ್ಕಾರ ಬುಲೆಟ್ ರೈಲು ಯೋಜನೆಗೆ ಕೈಹಾಕಿದ್ದು, ಇದೇ ಕಾರಣಕ್ಕೆ ಜಪಾನ್ ಪ್ರಧಾನಿ ಶಿಂಜೋ ಅಬೆ ಅವರ ಈ ಎರಡು ದಿನಗಳ ಭಾರತ ಪ್ರವಾಸ ತೀವ್ರ ಕುತೂಹಲ ಕೆರಳಿಸಿದೆ.
ಇನ್ನು ಜಪಾನ್ ಪ್ರಧಾನಿ ಶಿಂಜೋ ಅಬೆ ಅವರಿಗೆ ಅದ್ಧೂರಿ ಸ್ವಾಗತ ಕೋರುವ ನಿಟ್ಟಿನಲ್ಲಿ ಅಹ್ಮದಾಬಾದ್ ವಿಮಾನ ನಿಲ್ದಾಣದಿಂದಲೇ ಅದ್ಧೂರಿ ರೋಡ್ ಶೋ ಆಯೋಜಿಸಲಾಗಿದ್ದು, ಅಹಮದಬಾದ್ ವಿಮಾನ ನಿಲ್ದಾಣದಿಂದ  ಪ್ರಾರಂಭಗೊಳ್ಳುವ ರೋಡ್‌ ಶೋ ಸುಮಾರು 8 ಕಿಲೋಮೀಟರ್‌ ಕ್ರಮಿಸಿ ಬಳಿಕ ಐತಿಹಾಸಿಕ ಸಾಬರಮತಿ ಆಶ್ರಮದಲ್ಲಿ ಕೊನೆಗೊಳ್ಳಲಿದೆ. ರೋಡ್‌ ಶೋ ನಂತರ ಸಾಬರಮತಿ ಆಶ್ರಮದಲ್ಲೇ ಇಬ್ಬರು ನಾಯಕರು ತಂಗಲಿದ್ದು,  ಸಂಜೆ ನಗರದ ಪೂರ್ವ ಭಾಗದ ಸಿದಿ ಸೈಯ್ಯದ್ ಮಸೀದಿಗೆ ಭೇಟಿ ನೀಡಲಿದ್ದಾರೆ.
ಇದೇ ಮೊದಲ ಬಾರಿಗೆ ಭಾರತದ ಪ್ರಧಾನಿ ಇನ್ನೊಂದು ದೇಶದ ಪ್ರಧಾನಿಯೊಂದಿಗೆ ರೋಡ್‌ ಶೋನಲ್ಲಿ ಭಾಗವಹಿಸುತ್ತಿದ್ದಾರೆ. ಇನ್ನು ಶಿಂಜೋ ಅಬೆ ಭಾರತ ಭೇಟಿ ಪ್ರಮುಖ ಎನಿಸಿದ್ದು, ಭಾರತ-ಜಪಾನ್ ನಡುವಿನ ವಿವಿಧ  ಕ್ಷೇತ್ರಗಳಲ್ಲಿನ ಸಹಕಾರದ ಪ್ರಗತಿಯನ್ನು ಇಬ್ಬರೂ ನಾಯಕರು ಪರಿಶೀಲನೆ ನಡೆಸಲಿದ್ದಾರೆ ಎಂದು ತಿಳಿದುಬಂದಿದೆ. ಸೆಪ್ಟಂಬರ್‌ 14ರಂದು ಅಂದರೆ ನಾಳೆ ಮುಂಬೈ-ಅಹಮದಾಬಾದ್ ನಡುವಿನ ಬುಲೆಟ್‌ ರೈಲು ಯೋಜನೆಗೆ  ಉಭಯ ನಾಯಕರು ಚಾಲನೆ ನೀಡಲಿದ್ದಾರೆ. ಆನಂತರ ಗುಜರಾತ್‌ ನ ಗಾಂಧಿನರದಲ್ಲಿ ನಡೆಯಲಿರುವ 12ನೇ ಭಾರತ ಮತ್ತು ಜಪಾನ್‌ ವಾರ್ಷಿಕ ಶೃಂಗಸಭೆಯಲ್ಲಿ ಶಿಂಜೋ ಅಬೆ ಮತ್ತು ಪ್ರಧಾನಿ ಮೋದಿ ಪಾಲ್ಗೊಳ್ಳಲಿದ್ದಾರೆ
RELATED ARTICLES  ಶ್ರೀಗಳನ್ನು ದೋಷಮುಕ್ತಗೊಳಿಸಿದ ತೀರ್ಪಿನಲ್ಲಿ, ಯಾವುದೇ ಅನೈತಿಕ ಸಂಬಂಧವಿತ್ತೆಂದು ಹೇಳುವ ವಿಚಾರಗಳಿಲ್ಲ - ನ್ಯಾಯಾಲಯ