ಹೊನ್ನಾವರ : ಬಡತನ ನಿರ್ಮೂಲನೆಗಾಗಿ ಸರ್ಕಾರ ಒಂದಿಲ್ಲೊಂದು ಯೋಜನೆಗಳ ಮೂಲಕ ಹಸಿವು ನೀಗಿಸುವ ಪ್ರಯತ್ನವನ್ನು ಮಾಡುತ್ತಿದೆ. ಆದರೆ ಸರ್ಕಾರದ ಯೋಜನೆಗಳು ಬಡವರನ್ನ ತಲುಪದೆ, ಯೋಜನೆಗಳು ಬೇರೆ ರೂಪದಲ್ಲಿ ಇನ್ನೊಬ್ಬರ ಹೊಟ್ಟೆತುಂಬಿಸುವ ಪ್ರಕರಣಗಳು ಹೊಸತಲ್ಲ ಇಂತಹುದೇ ಒಂದು ಪ್ರಕರಣ ಹೊನ್ನಾವರದಲ್ಲಿ ಬೆಳಕಿಗೆ ಬಂದಿದೆ. ಬಡವರಿಗೆ ವಿತರಿಸಬೇಕಿದ್ದ ಬರೋಬ್ಬರಿ 500 ಕ್ವಿಂಟಾಲ್ ರೇಷನ್ ಅಕ್ಕಿಯನ್ನು ಕಂಟೇನರ್ ಗಳಲ್ಲಿ ತುಂಬಿಕೊಂಡು ಅಕ್ರಮವಾಗಿ ಸಾಗಿಸುತ್ತಿರುವುದನ್ನು ಪತ್ತೆ ಹಚ್ಚಿದ ಹೊನ್ನಾವರ ಪೊಲೀಸರು ಅಕ್ಕಿ, ಲಾರಿ ಹಾಗೂ ಚಾಲಕರನ್ನು ವಶಕ್ಕೆ ಪಡೆದಿದ್ದಾರೆ.
ಹಾವೇರಿ ಜಿಲ್ಲೆಯ ಅಕ್ಕಿ ಆಲೂರಿನಿಂದ ಮಂಗಳೂರು ಕಡೆಗೆ ಕಂಟೇನರ್ ಗಳಲ್ಲಿ ಅಕ್ಕಿಯನ್ನು ಸಾಗಿಸುತ್ತಿದ್ದರು ಎನ್ನಲಾಗಿದೆ. ಇಷ್ಟು ದೊಡ್ಡ ಪ್ರಮಾಣದಲ್ಲಿ ಅಕ್ರಮವಾಗಿ ಬಡವರು ತಿನ್ನುವ ಅಕ್ಕಿಯ ಕಳ್ಳ ಸಾಗಾಟದ ಹಿಂದೆ ಯಾರಿದ್ದಾರೆ ಎನ್ನುವ ಬಗ್ಗೆ ಪೊಲೀಸರ ತನಿಖೆಯಿಂದ ತಿಳಿದುಬರಬೇಕಿದೆ. ಈ ಬಗ್ಗೆ ಪೊಲೀಸ್ ತನಿಖೆ ನಡೆಸಲಾಗುವುದು ಎಂದು ತಿಳಿದುಬಂದಿದೆ.
ಸಿ.ಪಿ.ಐ ಶ್ರೀಧರ್ ಎಸ್.ಆರ್, ಪಿ.ಎಸ್.ಐ ಶಶಿಕುಮಾರ್ ಸಿ.ಆರ್, ಕಾನಸ್ಟೇಬಲ್ ಮಹಾವೀರ್ ಸೇರಿದಂತೆ ಹೊನ್ನಾವರ ಪೊಲೀಸ್ ಠಾಣೆಯ ಸಿಬ್ಬಂದಿಗಳು ಅಕ್ರಮವಾಗಿ ಅಕ್ಕಿ ಸಾಗಿಸುತ್ತಿದ್ದ ಲಾರಿಯನ್ನು ವಶಪಡಿಸಿಕೊಂಡು ಕ್ರಮಕ್ಕೆ ಮುಂದಾಗಿದ್ದಾರೆ. ಮಾಲು ಸಮೇತ ಲಾರಿಯನ್ನು ವಶಪಡಿಸಿಕೊಂಡಿರುವ ಪೊಲೀಸರು ಆರೋಪಿತರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ ಎನ್ನಲಾಗಿದೆ.