ಶಿರಸಿ : ತಾಲೂಕಿನ ಪಂಡಿತ ಸಾರ್ವಜನಿಕ ಆಸ್ಪತ್ರೆಯ ಆಡಳಿತಾಧಿಕಾರಿ ಹಾಗೂ ಏಕೈಕ ಮೂತ್ರ ರೋಗ ತಜ್ಞರು, ಲೈಂಗಿಕ ವೈದ್ಯರಾದ ಡಾ.ಗಜಾನನ ಭಟ್ ಹಾಗೂ ಅವರ ಧರ್ಮ ಪತ್ನಿ ಶ್ರೀಮತಿ ಡಾ. ಅನುರಾಧಾ ಅವರ ಸಹಕಾರದೊಂದಿಗೆ ” ತಾಯಂದಿರ ಜನನಾಂಗ ಸಮಸ್ಯೆ ಮತ್ತು ಪರಿಹಾರ ” ದ ಕುರಿತಾಗಿ ಮಂಡಿಸಿದ ಸಂಶೋಧನಾ ಪ್ರಬಂಧಕ್ಕೆ ವಿಶ್ವದ ಅತ್ಯುತ್ತಮ ಪ್ರಶಸ್ತಿ ಲಭಿಸಿರುವುದು ನಮ್ಮ ಉತ್ತರ ಕನ್ನಡ ಜಿಲ್ಲೆಯ ಜನತೆಗೆ ಅತ್ಯಂತ ಹೆಮ್ಮೆಯ ಸಂಗತಿ.
ಐ ಎಸ್‌ಎಸ್ ಎಂ ( ಇಂಟರ್‌ನ್ಯಾಷನಲ್ ಸೊಸೈಟಿ ಫಾರ್ ಸೆಕ್ಯುವಲ್ ಮೆಡಿಸಿನ್ ) ನಿಂದ ಟೋಕಿಯೋದಲ್ಲಿ ನಡೆದ ವಿಶ್ವ ಲೈಂಗಿಕ ತಜ್ಞರ ಸಮ್ಮೇಳನದಲ್ಲಿ ಈ ಪ್ರಶಸ್ತಿ ಘೋಷಿಸಲಾಗಿದ್ದು ಈ ವಿಭಾಗದಲ್ಲಿ ಪ್ರಶಸ್ತಿ ಪಡೆದ ಪ್ರಥಮ ಭಾರತೀಯ ವೈದ್ಯರಿವರು ಎನ್ನುವುದು ಹೆಮ್ಮೆಯ ಸಂಗತಿಯಾಗಿದೆ. ಡಾ. ಗಜಾನನ ಭಟ್ ದಂಪತಿ ಆನ್‌ಲೈನಲ್ಲಿ ಸ್ವೀಕರಿಸಿದ ಈ ಅಂತಾರಾಷ್ಟ್ರೀಯ ಪ್ರಶಸ್ತಿಯು 2,500 ಯು ಎಸ್ ಡಾಲರ್ ಮೊತ್ತ ಹಾಗೂ ಪ್ರಶಸ್ತಿಪತ್ರವನ್ನೊಳಗೊಂಡಿದೆ.
ಶೃಂಗಾರದ ಅಥವಾ ಲೈಂಗಿಕತೆಯ ಕುರಿತಾಗಿ ಮುಕ್ತ ಸಂವಾದವೂ ನಡೆಯುವುದು ವಿರಳವಾದ ಭಾರತದಂಥ ಸಾಂಸ್ಕೃತಿಕ ಮಡಿವಂತಿಕೆಯ ದೇಶದಲ್ಲಿ, ಅದರಲ್ಲೂ ಶಿರಸಿಯಂಥ ಪುಟ್ಟನಗರದಲ್ಲಿ ವೃತ್ತಿನಿರತರಾದ ಡಾ. ಭಟ್, ಅಧ್ಯಯನದ ದೃಷ್ಟಿಯಲ್ಲಿ ಅತ್ಯಂತ ಸೂಕ್ಷ್ಮಸಂಕೀರ್ಣವಾದರೂ ಬಹುತೇಕ ಸಾರ್ವತ್ರಿಕ ಸಮಸ್ಯೆ ಎನಿಸಿದ, ‘ಪುನರಾವರ್ತಿತ ಸಹಜ ಪ್ರಸೂತಿ ನಂತರ ಜನನಾಂಗದ ಮಾಂಸಖಂಡಗಳು (ಪೆಲ್ವಿಕ್ ಫೋರ್ ಮಸಲ್) ಸ್ಥಿತಿ ಸ್ಥಾಪಕತ್ವ ಕಳೆದುಕೊಂಡು ಅನಿಯಂತ್ರಿತ ಮೂತ್ರ ವಿಸರ್ಜನೆಯಂಥ ಸಮಸ್ಯೆಗೀಡಾಗುವುದು ಮತ್ತು ತರುವಾಯದ ಲೈಂಗಿಕಕ್ರಿಯೆಯಲ್ಲಿ ಮೊದಲಿನ ಹಿತ ಲಭಿಸದಿರುವ ಊನತೆಗೆ ಪರಿಹಾರವಾಗಿ ಅವು ಪುನರ್ ಶಕ್ತಿ ಪಡೆದುಕೊಳ್ಳಲು ಅನುಸರಿಸಬೇಕಾದ ನೂತನ ಸ್ವಯಂ ಚಿಕಿತ್ಸೆ ವಿಧಾನ’ದ ಬಗ್ಗೆ ಈ ಗ್ರಂಥ ಮಾರ್ಗದರ್ಶಿಸಿಯಾಗಲಿದೆ ಎನ್ನಲಾಗಿದೆ.