ಅಂಕೋಲಾ : ದೇಶದ ಯುವಕರನ್ನು ಆರೋಗ್ಯವಂತ ಪ್ರಜೆಗಳನ್ನಾಗಿ ರೂಪಿಸುವುದರೊಂದಿಗೆ ರಾಷ್ಟ್ರ ಬೆಳೆಯುವ ದಿಕ್ಕನ್ನು ಬದಲಿಸಿ ಸ್ವದೇಶಿ ವಸ್ತುಗಳ ಬಳಕೆಯಿಂದ ರಾಷ್ಟ್ರದ ಅಭಿವೃದ್ಧಿ ಮಾಡುವದಲ್ಲದೆ ಭಾರತ ಸಂಸ್ಕೃತಿ ಉಳಿಸುವ ಕಾರ್ಯವಾಗಬೇಕಾಗಿದೆ ಎಂದು ಪತಂಜಲಿ ಯೋಗ ಪೀಠ ಅಂಕೋಲಾದ ಯೋಗ ಪ್ರಸಾರಕರಾದ ವಿನಾಯಕ ಗುಡಿಗಾರ ಹೇಳಿದರು.
ಅವರು ಕೆ.ಎಲ್.ಇ. ಶಿಕ್ಷಣ ಮಹಾವಿದ್ಯಾಲಯ ಅಂಕೋಲಾ ಹಾಗೂ ಪತಂಜಲಿ ಯೋಗ ಪೀಠದ ಸಹಯೋಗದಲ್ಲಿ ಆಯೋಜಿಸಲಾಗಿದ್ದ ‘ಆರೋಗ್ಯ ಸಭಾ’ ಕಾರ್ಯಕ್ರಮದಲ್ಲಿ ಮಾತನಾಡಿ ನಮ್ಮ ಆಹಾರ ಪದ್ಧತಿಯಲ್ಲಿ ಬದಲಾವಣೆ ಮಾಡಿಕೊಂಡು ಮುಂದಿನ ಜನಾಂಗಕ್ಕೆ ಉತ್ತಮ ಆರೋಗ್ಯ ಉಳಿಯುವಂತೆ ಮಾಡಬೇಕು ಹಾಗೂ ಯೋಗ ಪ್ರಪಂಚಕ್ಕೆ ಭಾರತದ ಕೊಡುಗೆ ಎಂದು ಅಭಿಪ್ರಾಯಪಟ್ಟರು.
ಕೆ.ಎಲ್.ಇ. ಸಮೂಹ ಸಂಸ್ಥೆಯ ಸಂಯೋಜಕ ಆರ್. ನಟರಾಜ ಅಧ್ಯಕ್ಷತೆ ವಹಿಸಿ ಮಾತನಾಡಿ ಧನಾತ್ಮಕ ಯೋಚನೆಯನ್ನು ಮೈಗೂಡಿಸಿಕೊಂಡು ಋಣಾತ್ಮಕ ಚಿಂತನೆಯನ್ನು ಹೊಡೆದೋಡಿಸಲು ಹಾಗೂ ಮಾನಸಿಕ ದೃಡತೆ ಹೆಚ್ಚಿಸುವಲ್ಲಿ ಯೋಗ ಪ್ರಮುಖ ಪಾತ್ರ ವಹಿಸುತ್ತದೆ ಎಂದರು.
ಕಾಲೇಜಿನ ಪ್ರಾಚಾರ್ಯ ವಿನಾಯಕ ಜಿ. ಹೆಗಡೆ, ಉಪನ್ಯಾಸಕ ಮಂಜುನಾಥ ಇಟಗಿ, ಸ್ವಾತಿ ಅಂಕೋಲೆಕರ ಉಪಸ್ಥಿತರಿದ್ದರು.