ಮುರುಡೇಶ್ವರ: ಉತ್ತರ ಕನ್ನಡದಲ್ಲಿ ಪ್ರವಾಸಕ್ಕೆ ಬರುವವರ ಸಂಖ್ಯೆ ಮತ್ತೆ ಏರಿಕೆ ಕಾಣುತ್ತಿದ್ದು, ಸಮುದ್ರಕ್ಕೆ ಇಳಿದು ಜೀವ ಕಳೆದುಕೊಳ್ಳುವವರ ಪ್ರಮಾಣವು ಹೆಚ್ಚುತ್ತಿರುವುದು ದುರ್ದಷ್ಟಕರ ಸಂಗತಿ. ಪ್ರಸಿದ್ಧವಾದ ಶಿವ ಕ್ಷೇತ್ರ ಹಾಗೂ ಪ್ರವಾಸೀ ತಾಣವಾದ ಮುರ್ಡೇಶ್ವರದ ತೂದಳ್ಳಿಯಲ್ಲಿ ಪ್ರವಾಸಕ್ಕೆಂದು ಬಂದ ಇಬ್ಬರು ಯುವಕರು ಮೋಜು-ಮಸ್ತಿಯೆಂದು ಸಮುದ್ರಕ್ಕೆ ಇಳಿದಿದ್ದ ವೇಳೆ ಓರ್ವ ನೀರಲ್ಲಿ ಮುಳುಗಿ ಮೃತಪಟ್ಟ ಘಟನೆ ನಡೆದಿದೆ.
ಮೃತಪಟ್ಟವನನ್ನು ಕನಕಪುರದ ರಘುನಂದನ ಎಂದು ಗುರುತಿಸಲಾಗಿದೆ. ಇನ್ನೊರ್ವ ಸಮುದ್ರಕ್ಕೆ ಇಳಿದು ಅಪಾಯದಲ್ಲಿದ್ದ ಪ್ರವಾಸಿಗ ಬಸವರಾಜು ಎನ್ನುವವರನ್ನು ಲೈಫ್ ಗಾರ್ಡ್ ಸಿಬ್ಬಂದಿ ರಕ್ಷಿಸಿದ್ದಾರೆ.
ಕನಕಪುರದಿಂದ 10 ಜನ ಯುವಕರು ಟೆಂಪೋ ಟ್ರಾಕ್ಸ್ ಮಾಡಿಕೊಂಡು ಮುರುಡೇಶ್ವರಕ್ಕೆ ಪ್ರವಾಸಕ್ಕೆಂದು ಬಂದಿದ್ದರು. ಈ ವೇಳೆ ಮುರುಡೇಶ್ವರ ದೇವಸ್ಥಾನದಿಂದ 1 ಕಿ.ಮೀ ದೂರದಲ್ಲಿರುವ ತೂದಳ್ಳಿಯ ಸಮುದ್ರದಲ್ಲಿ ಈಜುತ್ತಿದ್ದಾಗ ಅಲೆತ ಹೊಡೆತಕ್ಕೆ ಈರ್ವರು ನೀರಿನಲ್ಲಿ ಮುಳುಗಿದ್ದಾರೆ. ಈ ವೇಳೆ ಓರ್ವನನ್ನು ರಕ್ಷಣೆ ಮಾಡಲಾಗಿದೆ. ರಘುನಂದನ್ ಮಾತ್ರ ಅಲೆಯಲ್ಲಿ ಕೊಚ್ಚಿಹೋಗಿ ನಾಪತ್ತೆಯಾಗಿದ್ದು, ಕೆಲ ತಾಸುಗಳ ಬಳಿಕ ರಘುನಂದನ್ ಮೃತದೇಹ ಪತ್ತೆಯಾಗಿದೆ. ರಕ್ಷಣೆ ಮಾಡಿದ ಬಸವರಾಜ್ ಗೆ ಪ್ರಥಮ ಚಿಕಿತ್ಸೆ ನೀಡಿ ಕೂಡಲೇ ಆಸ್ಪತ್ರೆಗೆ ಸಾಗಿಸಲಾಗಿದೆ. ಮುರ್ಡೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.