ಯಲ್ಲಾಪುರ: ಕಳೆದ ವಾರ ನಡೆದ ಆಕಸ್ಮಿಕ ಅಪಘಾತದಲ್ಲಿ ತಲೆಗೆ ಪೆಟ್ಟು ಬಿದ್ದು ತೀವೃ ಗಾಯಗೊಂಡು ಹುಬ್ಬಳ್ಳಿಯ ಖಾಸಗಿ ಆಸ್ಪತ್ರೆಯ ತೀವೃ ನಿಗಾ ಘಟಕದಲ್ಲಿ ದಾಖಲಾಗಿದ್ದ ತಾಲೂಕಿನ ವಜ್ರಳ್ಳಿಯ ಸುರೇಂದ್ರ(ಸೂರಿ) ರಾಮಯ್ಯ ಶೇರುಗಾರ, ಚಿಕಿತ್ಸೆ ಫಲಕಾರಿಯಾಗದೇ ಹುಬ್ಬಳ್ಳಿಯಲ್ಲಿ ಅಸುನೀಗಿದ್ದಾರೆ.
ಸುರೇಂದ್ರರವರು ವೃತ್ತಿಯಲ್ಲಿ ಅಂಚೆ ಇಲಾಖೆಯ ದಾಂಡೇಲಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಪ್ರವೃತ್ತಿಯಲ್ಲಿ ಉತ್ತಮ ಕ್ರೀಡಾಪಟುವಾಗಿದ್ದರು. ತಂದೆ ರಾಮಯ್ಯ ಶೇರುಗಾರ, ತಾಯಿ ಲಲಿತಾ, ಸಹೋದರನಾದ ನರೇಶ ಮತ್ತು ಅಪಾರ ಗೆಳೆಯರ ಬಳಗವನ್ನು ಸೂರಿ ಅಗಲಿದ್ದಾರೆ. ವಜ್ರಳ್ಳಿಯ ಶೆಳೆಮನೆಯಲ್ಲಿ ಬುಧವಾರ ಸಂಜೆ ನಡೆದ ಮೃತನ ಅಂತ್ಯಕ್ರಿಯೆಯಲ್ಲಿ ಅಪಾರ ಅಭಿಮಾನಿಗಳು, ಊರ ನಾಗರಿಕರು, ವಿವಿಧ ಸಂಘ ಸಂಸ್ಥೆಗಳ ಪ್ರತಿನಿಧಿಗಳು ಭಾಗವಹಿಸಿ ಅಂತಿಮ ದರ್ಶನ ಮಾಡಿದರು. ಸರ್ಕಾರದ ಪರವಾಗಿ ಸ್ಥಳೀಯ ಗ್ರಾಮ ಪಂಚಾಯತ ಅಭಿವೃದ್ಧಿ ಅಧಿಕಾರಿ ಸಂತೋಷಿ ಆರ್ ಬಂಟ್ ಭೇಟಿ ನೀಡಿ ಅಂತಿಮ ಗೌರವ ಸಲ್ಲಿಸಿದರು.
ಇನ್ನೊಂದೆಡೆ ಈ ಸಾವು ಉತ್ತರ ಕನ್ನಡದಲ್ಲಿ ಮಲ್ಟಿಸ್ಪೆಷಲಿಟಿ ಆಸ್ಪತ್ರೆಯಲ್ಲಿನ ಧ್ವನಿಯನ್ನು ಹೆಚ್ಚಿಸಿದೆ. ಉತ್ತರ ಕನ್ನಡದಲ್ಲಿ ಯಾವುದೇ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗಳು ಇಲ್ಲದ ಕಾರಣ ಚಿಕಿತ್ಸೆಗಾಗಿ ಬೇರೆ ಜಿಲ್ಲೆಗೆ ತೆರಳಬೇಕಾಗಿದ್ದು ಇದು ಉತ್ತರಕನ್ನಡಿಗರ ಸಾವಿಗೆ ಕಾರಣ ಎಂಬ ಮಾತುಗಳು ಸಾರ್ವಜನಿಕ ವಲಯದಲ್ಲಿ ಹಾಗೂ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.