ಶಿರಸಿ: ಸಿದ್ದಾಪುರದ ಅನಂತ ಯಕ್ಷಕಲಾ ಪ್ರತಿಷ್ಠಾನವು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಕಾರದಲ್ಲಿ ಕೊಳಗಿಬೀಸ್ ಮಾರುತಿ ದೇವಸ್ಥಾನದಲ್ಲಿ ನ.27ರ ಸಂಜೆ 6ರಿಂದ ಸಾಂಸ್ಕೃತಿಕ ಸಂಜೆ ಕಾರ್ಯಕ್ರಮ ಹಮ್ಮಿಕೊಂಡಿದೆ.
ವಿಶ್ವಶಾಂತಿ ಯಕ್ಷನೃತ್ಯ ರೂಪಕಗಳ ಮೂಲಕ ಗಮನ ಸೆಳೆದ ಕು.ತುಳಸಿ ಹೆಗಡೆ ಅವಳಿಂದ ಪಂಚಪಾವನ ಕಥಾ ಯಕ್ಷನೃತ್ಯ ರೂಪಕ ಪ್ರಸ್ತುತವಾಗಲಿದೆ. ಹಿಮ್ಮೇಳದಲ್ಲಿ ಪ್ರಸಿದ್ಧ ಭಾಗವತ ಕೇಶವ ಹೆಗಡೆ ಕೊಳಗಿ, ಮದ್ದಲೆಯಲ್ಲಿ ಮಂಜುನಾಥ ಗುಡ್ಡೆದಿಂಬ, ಚಂಡೆಯಲ್ಲಿ ವಿಘ್ನೇಶ್ವರ ಗೌಡ ಕೆಸರಕೊಪ್ಪ, ಪ್ರಸಾದನದಲ್ಲಿ ವೆಂಕಟೇಶ ಬೊಗ್ರಿಮಕ್ಕಿ ಸಹಕಾರ ನೀಡಲಿದ್ದಾರೆ.
ಇದಕ್ಕೂ ಮುನ್ನ ಉಪ ಅರಣ್ಯ ಸಂರಕ್ಷಣಾಧಿಕಾರಿ ಎಸ್.ಜಿ.ಹೆಗಡೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದು, ಅಧ್ಯಕ್ಷತೆಯನ್ನು ದೇವಸ್ಥಾನ ಆಡಳಿತ ಮಂಡಳಿ ಅಧ್ಯಕ್ಷ ಶ್ರೀಧರ ಹೆಗಡೆ ಇಳ್ಳುಮನೆ ವಹಿಸಿಕೊಳ್ಳಲಿದ್ದಾರೆ. ಅತಿಥಿಗಳಾಗಿ ನಿವೃತ್ತ ಅಧಿಕಾರಿ ಎಂ.ಎಸ್.ಜೋಶಿ, ದೇವಸ್ಥಾನದ ಪ್ರಧಾನ ಅರ್ಚಕ ವಿ.ಕುಮಾರ ಭಟ್ಟ ಕೊಳಗಿಬೀಸ್ ಪಾಲ್ಗೊಳ್ಳಲಿದ್ದಾರೆ. ಕಲಾಸಕ್ತರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವಂತೆ ಪ್ರತಿಷ್ಠಾನದ ಅಧ್ಯಕ್ಷ ವಿ.ಎಂ.ಭಟ್ಟ ಸಿದ್ದಾಪುರ ತಿಳಿಸಿದ್ದಾರೆ.