ಬೆಂಗಳೂರು : ಹೊನ್ನಾವರ ಬಂದರು ಅಭಿವೃದ್ಧಿಗೆ ವಿರೋಧ ವ್ಯಕ್ತಪಡಿಸಿದ್ದ ಸಾರ್ವಜನಿಕ ಹಿತಾಸಕ್ತಿ ಮನವಿ ವಿಲೇವಾರಿ ಮಾಡಿದ ಕೋರ್ಟ ದೇಶದ ಆರ್ಥಿಕತೆಗೆ ಮಾರಕವಾಗುವ ಪ್ರಕರಣಗಳಲ್ಲಿ ಮಧ್ಯಪ್ರವೇಶಿಸಲಾಗದು” ಎಂದು ಬುಧವಾರ ಹೇಳಿದೆ. ಹೊನ್ನಾವರ ತಾಲ್ಲೂಕು ಹಸಿಮೀನು ವ್ಯಾಪರಸ್ಥರ ಸಂಘ ಸಲ್ಲಿಸಿದ್ದ ಮನವಿಯ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ ಮತ್ತು ನ್ಯಾಯಮೂರ್ತಿ ಸಚಿನ್ ಶಂಕರ್ ಮಗದುಮ್ ನೇತೃತ್ವದ ವಿಭಾಗೀಯ ಪೀಠವು ನಡೆಸಿತು.
ಇಡೀ ಪ್ರಕರಣವನ್ನು ಪರಿಗಣಿಸಿ ರಿಟ್ ಮನವಿಯನ್ನು ನಾವು ವಿಲೇವಾರಿ ಮಾಡಿದ್ದು, ಅರ್ಜಿದಾರರು ಐದನೇ ಪ್ರತಿವಾದಿಯಾದ ಲೋಕೋಯೋಗಿ, ಬಂದರು ಮತ್ತು ಒಳಸಾರಿಗೆ ಇಲಾಖೆಯ ಪ್ರಧಾನ ಕಾರ್ಯದರ್ಶಿ ಅವರ ಬಳಿ ತಮ್ಮ ಅಹವಾಲು ಮಂಡಿಸಬಹುದು. ಅವರು ಅರ್ಜಿದಾರರ ಅಹವಾಲನ್ನು ಪರಿಗಣಿಸಿ ಅಗತ್ಯ ಕಂಡುಬಂದರೆ ಕಾನೂನಿನ ಅನುಸಾರ ಅಗತ್ಯ ಆದೇಶ ಹೊರಡಿಸಬೇಕು” ಎಂದು ಪೀಠವು ಆದೇಶದಲ್ಲಿ ಹೇಳಿದೆ ಎಂದು ಬಾರ್ ಅಂಡ್ ಬೆಂಚ್ ವರದಿ ಮಾಡಿದೆ.
ಕೇಂದ್ರ ಪರಿಸರ ಮತ್ತು ಅರಣ್ಯ ಇಲಾಖೆಯಡಿ ಕೆಲಸ ಮಾಡುವ ರಾಷ್ಟ್ರೀಯ ಸುಸ್ಥಿರ ಕರಾವಳಿ ನಿರ್ವಹಣೆ ಕೇಂದ್ರಕ್ಕೆ (ಎನ್‌ಸಿಎಸ್‌ಸಿಎಂ) ಸರ್ವೆ ನಡೆಸುವಂತೆ ಜುಲೈ 13ರಂದು ನ್ಯಾಯಾಲಯ ಆದೇಶಿಸಿತ್ತು. ಇದರ ಭಾಗವಾಗಿ ಸಲ್ಲಿಸಿದ್ದ ವರದಿಯನ್ನು ಪರಿಶೀಲಿಸಿದ ಪೀಠವು “ಸರ್ವೆಯ ಸಂದರ್ಭದಲ್ಲಿ ಪ್ರಸ್ತಾವಿತ 45 ಹೆಕ್ಟೇರ್ ಪ್ರದೇಶದಲ್ಲಿ ಕಡಲಾಮೆಯ ಗೂಡು, ಕಡಲಾಮೆ ಅಥವಾ ಸತ್ತ ಕಡಲಾಮೆ ಪತ್ತೆಯಾಗಲಿಲ್ಲ ಎಂದು ಹೇಳಲಾಗಿದೆ” ಎಂದು ಪೀಠ ಹೇಳಿತು ಎಂದು ವರದಿ ತಿಳಿಸಿದೆ.
ಆಕ್ಷೇಪಿತ ಬಂದರಿನ ಬೇಡಿಕೆ ಮತ್ತು ಅಗತ್ಯವನ್ನು ಆಧರಿಸಿ ಸ್ಥಳ ನಿರ್ಧರಿಸಲಾಗಿರುತ್ತದೆ. ಅಗತ್ಯವನ್ನು ಆಧರಿಸಿ ಎಲ್ಲಿ ಬಂದರು ನಿರ್ಮಿಸಬೇಕು ಎಂಬುದನ್ನು ತಜ್ಞರು ನಿರ್ಧರಿಸುತ್ತಾರೆ. ಬಂದರಿನ ಅಭಿವೃದ್ಧಿಗೆ ಭೋಗ್ಯಕ್ಕೆ ನೀಡಲಾಗಿರುವ ಪ್ರದೇಶವು ಕಡಲಾಮೆಗಳು ಗೂಡು ಕಟ್ಟುವ ಸ್ಥಳ ಎಂದು ಅರ್ಜಿದಾರರು ಹೇಳಿದ್ದಾರೆ. ಎನ್‌ಸಿಎಸ್‌ಸಿಎಂ ಸರ್ವೆ ವರದಿಯ ಪ್ರಕಾರ ಕಡಲಾಮೆಯ ಗೂಡು, ಕಡಲಾಮೆ ಅಥವಾ ಸತ್ತ ಕಡಲಾಮೆ ಪತ್ತೆಯಾಗಲಿಲ್ಲ ಎಂದು ಹೇಳಲಾಗಿದೆ. ಅದಾಗ್ಯೂ, ಕಡಲಾಮೆಗಳು ಗೂಡುಕಟ್ಟುವುದು ಮತ್ತು ಕಣ್ಮರೆಯಾಗುತ್ತಿರುವ ಜೀವಿಗಳಿಗೆ ಯಾವುದೇ ಸಮಸ್ಯೆಯಾಗದಂತೆ ಖಾತರಿವಹಿಸುವುದು ಸಂಬಂಧಪಟ್ಟ ಇಲಾಖೆಗಳ ಕೆಲಸ ಎಂದು ಪೀಠ ಹೇಳಿದೆ.
ಆಕ್ಷೇಪಾರ್ಹವಾದ ಬಂದರು ನಿರ್ಮಿಸುವುದಕ್ಕೂ ಮುನ್ನ ಕೇಂದ್ರ ಪರಿಸರ ಮತ್ತು ಅರಣ್ಯ ಇಲಾಖೆ ಹಾಗೂ ಸಂಬಂಧ ಸಂಸ್ಥೆಗಳ ಅನುಮತಿಗೆ ಸಂಬಂಧಿಸಿದಂತೆ ಪ್ರತಿವಾದಿಗಳು ಅಗತ್ಯ ಒಪ್ಪಿಗೆ, ಅನುಮತಿ ಪಡೆಯಬೇಕು” ಎಂದು ನ್ಯಾಯಾಲಯವು ಇದೇ ಸಂದರ್ಭದಲ್ಲಿ ಸ್ಪಷ್ಟವಾಗಿ ಹೇಳಿದೆ.