ಮೈಸೂರು: ನಾಡಿನ ಪ್ರಖ್ಯಾತ ವಿದ್ವಾಂಸ, ಲೇಖಕ, ಅಂಕಣಕಾರರಾಗಿದ್ದ ಪ್ರೊ. ಡಾ. ಕೆ.ಎಸ್ ನಾರಾಯಣಾಚಾರ್ಯ (88) ಅವರು ನ.26 ರಂದು ಮಧ್ಯರಾತ್ರಿ ಮೈಸೂರಿನ ತಮ್ಮ ಸ್ವಗೃಹದಲ್ಲಿ ನಿಧನರಾಗಿದ್ದಾರೆ. ಹಿರಿಯ ವಿದ್ವಾಂಸರು ಇತ್ತೀಚಿನ ದಿನಗಳಲ್ಲಿ ಅನಾರೋಗ್ಯ ಎದುರಿಸುತ್ತಿದ್ದರು ಎಂದು ಆಪ್ತವರ್ಗಗಳು ತಿಳಿಸಿವೆ. 1933 ರಲ್ಲಿ ಕನಕಪುರದ ಶ್ರೀ ವೈಷ್ಣವ ಕುಟುಂಬದಲ್ಲಿ ಜನಿಸಿದ್ದ ಪ್ರೊ.ಕೆ.ಎಸ್ ನಾರಾಯಣಾಚಾರ್ಯ ಮೈಸೂರು ವಿವಿಯಿಂದ ಬಿಎಸ್ ಸಿ (1954) ಬಿಎ (ಆನರ್ಸ್, 1957), ಎಂಎ (ಇಂಗ್ಲೀಷ್ 1958) ಪದವಿಯನ್ನು ಪಡೆದಿದ್ದರು.
ಟಿ.ಎಸ್ ಎಲಿಯೇಟ್, ಡಬ್ಲ್ಯು. ಬಿ ಯೇಟ್ಸ್ ರ ಕಾವ್ಯದ ಮೇಲೆ ಭಾರತೀಯ ತತ್ವಶಾಸ್ತ್ರದ ಪ್ರಭಾವದ ವಿಷಯವಾಗಿ ಪ್ರಬಂಧ ಮಂಡಿಸಿದ್ದ ಇವರು 1959-61 ರಲ್ಲಿ ಪಿಎಚ್ ಡಿ ಪಡೆದಿದ್ದರು. ರಾಮಾಯಣಕ್ಕೆ ಸಂಬಂಧಿಸಿದ ಕೃತಿಗಳು ಹಾಗೂ ಪ್ರವಚನಗಳಿಂದ ಪ್ರಖ್ಯಾತಿ ಪಡೆದಿದ್ದ ಡಾ.ಕೆಎಸ್ ನಾರಾಯಣಾಚಾರ್ಯ ಅವರು ರಾಮಾಯಣಾಚಾರ್ಯ ಎಂದೇ ಖ್ಯಾತಿ ಗಳಿಸಿದ್ದರು. ಆಚಾರ್ಯ ಚಾಣಕ್ಯ, ರಾಮಾಯಣ ಸಹಶ್ರೀ, ವಾಲ್ಮೀಕಿ ಯಾರು? ಗಾಂಧೀಜಿಯನ್ನು ನಿಜವಾಗಿ ಕೊಂದವರು ಯಾರು? ಮುಂತಾದ ಕೃತಿಗಳನ್ನು ರಚಿಸಿದ್ದ ಡಾ.ಕೆಎಸ್ ನಾರಾಯಣಾಚಾರ್ಯ ರಾಷ್ಟ್ರೀಯತೆ-ಹಿಂದೂ ಧರ್ಮ, ಸಂಸ್ಕೃತಿಗಳ ಪ್ರಖರ ಪ್ರತಿಪಾದಕರಾಗಿದ್ದರು.
ಇನ್ನು ‘ವಿದ್ವನ್ಮಣಿ’, ‘ವೇದಭೂಷಣ’, ‘ವಾಲ್ಮೀಕಿ ಹೃದಯಜ್ಞ’, ‘ರಾಮಾಯಣಾಚಾರ್ಯ’, ‘ಮಹಾಭಾರತಾಚಾರ್ಯ’ ಮೊದಲಾದ ಬಿರುದುಗಳು ವಿವಿಧ ಮಠಾಧೀಶರಿಂದ ಕೆ. ಎಸ್. ನಾರಾಯಣಾಚಾರ್ಯ ದೊರೆತಿದೆ. ಸರಕಾರದಿಂದ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಕೂಡ ದೊರೆತಿದೆ. ಇನ್ನು ವೇದ ಸಂಸ್ಕೃತಿಯ ಪರಿಚಯ, ಶ್ರೀ ರಾಮಾವತಾರ ಸಂಪೂರ್ಣವಾದಾ, ಶ್ರೀ ರಾಮಾಯಣ ಪಾತ್ರ ಪ್ರಪಂಚ, ಶ್ರೀ ಮಹಾಭಾರತ ಪಾತ್ರ ಪ್ರಪಂಚ ಸೇರಿ ಹಲವಾರು ಪುಸ್ತಕಗಳನ್ನು ಅವರು ಬರೆದಿದ್ದಾರೆ.