ಅಹ್ಮದಾಬಾದ್: ಬುಲೆಟ್ ರೈಲು ಯೋಜನೆ ಮಿತ್ರ ರಾಷ್ಟ್ರ ಜಪಾನ್ ಭಾರತಕ್ಕೆ ನೀಡಿರುವ ಅಮೂಲ್ಯ ಉಡುಗೊರೆ ಎಂದು ಪ್ರಧಾನಿ ನರೇಂದ್ರ ಮೋದಿ ಬಣ್ಣಿಸಿದ್ದಾರೆ.
ಗುರುವಾರ ಅಹ್ಮದಾಬಾದ್ ನ ಅಥ್ಲೆಟಿಕ್ಸ್ ಮೈದಾನದಲ್ಲಿ ಬುಲೆಟ್ ರೈಲು ಯೋಜನೆಗೆ ಚಾಲನೆ ನೀಡಿ ಮಾತನಾಡಿದ ಪ್ರಧಾನಿ ಮೋದಿ, ಜಪಾನ್ ಭಾರತದ ನಿಜವಾದ ಮಿತ್ರರಾಷ್ಟ್ರವಾಗಿದೆ. ಭಾರತ-ಜಪಾನ್ ದೇಶಗಳ ಸ್ನೇಹದ ಪ್ರತೀಕವಾಗಿ ಜಪಾನ್ ಭಾರತಕ್ಕೆ ಬುಲೆಟ್ ರೈಲನ್ನು ನೀಡುತ್ತಿದೆ. ಯಾವುದೇ ದೇಶಕ್ಕಾದರೂ ಅತ್ಯುತ್ತಮ ಸಾರಿಗೆ ವ್ಯವಸ್ಥೆ ಆದೇಶದ ಅಭಿವೃದ್ಧಿಯನ್ನು ಸೂಚಿಸುತ್ತದೆ. ಹೀಗಾಗಿ ದೇಶದ ಅಭಿವೃದ್ಧಿಯಲ್ಲಿ ಸಾರಿಗೆ ವ್ಯವಸ್ಥೆಗೆ ತುಂಬಾ ಪ್ರಾಮುಖ್ಯತೆ ಇದೆ. ಭಾರತದಲ್ಲಿ ಬುಲೆಟ್ ರೈಲು ನಿರ್ಮಾಣ ಮಾಡುವ ಯೋಜನೆಯಲ್ಲಿ ಜಪಾನ್ ಪ್ರಧಾನಿ ಹಾಗೂ ನನ್ನ ಗೆಳೆಯ ಶಿಂಜೋ ಅಬೆ ವೈಯುಕ್ತಿಕ ಆಸಕ್ತಿವಹಿಸಿದ್ದಾರೆ. ಭಾರತದ ಮೇಲೆ ಇಷ್ಟು ನಂಬಿಕಿ ಇರಿಸಿದಕ್ಕಾಗಿ ನಾನು ಮೊದಲು ಅವರಿಗೆ ಧನ್ಯವಾದ ಹೇಳುತ್ತೇನೆ. ಅಂತೆಯೇ ಭಾರತ-ಜಪಾನ್ ಸ್ನೇಹದ ದ್ಯೋತಕವಾಗಿರುವ ಈ ಬುಲೆಟ್ ರೈಲು ಯೋಜನೆಗೆ ಯಾವುದೇ ರೀತಿಯ ತೊಡಕು ಉಂಟಾಗುವುದಿಲ್ಲ ಎಂದು ನಾನು ಅವರಿಗೆ ಭರವಸೆ ನೀಡುತ್ತೇನೆ.”ಯಾವುದೇ ದೇಶವಾಗಲಿ ಅಥವಾ ವ್ಯಕ್ತಿಯಾಗಲಿ ನೀನು ಸಾಲ ತೆಗೆದಿಕೋ…50 ವರ್ಷಗಳ ಅವಧಿಯಲ್ಲಿ ಸಾಲವನ್ನು ತೀರಿಸು ಎಂದು ಯಾರಾದರೂ ಹೇಳುತ್ತಾರೆ. ಆದರೆ ಭಾರತದ ಮಿತ್ರ ಜಪಾನ್ ಈ ಮಾತನ್ನು ಹೇಳಿದೆ. ವಿಶ್ವ ಬ್ಯಾಂಕ್ ಕೂಡ 25-35 ವರ್ಷಗಳವರೆಗಿನ ಅವಧಿಗೆ ಮಾತ್ರ ಸಾಲ ನೀಡುತ್ತದೆ. ಆದರೆ ಜಪಾನ್ ಬುಲೆಟ್ ರೈಲು ಯೋಜನೆಗೆ ತಾಂತ್ರಿಕ ನೆರವಷ್ಟೇ ಅಲ್ಲದೆ ಯೋಜನೆಯ ಶೇ.80ರಷ್ಟು ಹಣವನ್ನು ತಾನೇ ನೀಡುತ್ತಿದೆ. ಅದೂ ಕೂಡ ಶೇ.0.1ರಷ್ಟು ಅತ್ಯಂತ ಕಡಿಮೆಬಡ್ಡಿದರದಲ್ಲಿ.. ಇದೇ ಕಾರಣಕ್ಕೆ ನಾನು ಬುಲೆಟ್ ರೈಲು ಜಪಾನ್ ದೇಶ ಭಾರತಕ್ಕೆ ನೀಡುತ್ತಿರುವ ಉಡುಗೊರೆ ಎಂದು ಹೇಳಿದೆ ಎಂದು ಪ್ರಧಾನಿ ಮೋದಿ ಹೇಳಿದರು.
ಇದೇ ವೇಳೆ ಯೋಜನೆ ಕುರಿತು ಮಾತನಾಡಿದ ಪ್ರಧಾನಿ ಮೋದಿ, ಬುಲೆಟ್ ರೈಲು ದೇಶದ ಸಾರಿಗೆ ವ್ಯವಸ್ಥೆಗೆ ವೇಗವನ್ನು ಮಾತ್ರ ತರುತಿಲ್ಲ. ಬದಲಿಗೆ ತನ್ನೊಂದಿಗೆ ಸುಮಾರು 40 ಸಾವಿರಕ್ಕೂ ಅಧಿಕ ಉದ್ಯೋಗಗಳನ್ನು ತರುತ್ತಿದೆ ಎಂದು ಹೇಳಿದರು. ಇದೇ ವೇಳೆ ಅಹ್ಮದಾಬಾದ್ ಜನತೆಗೆ ಧನ್ಯವಾದ ಹೇಳಿದ ಪ್ರಧಾನಿ ಮೋದಿ, ಜಪಾನ್ ಪ್ರಧಾನಿಯನ್ನು ನೀವು ಸ್ವಾಗತಿಸಿದ ರೀತಿ ಕೂಡ ಶ್ಲಾಘನೀಯವಾಗಿತ್ತು. ಈ ಕಾರಣಕ್ಕೆ ನಾನು ನಿಮಗೂ ಧನ್ಯವಾದ ಹೇಳುತ್ತೇನೆ ಎಂದು ಪ್ರಧಾನಿ ಮೋದಿ ಹೇಳಿದರು.