ಹೊನ್ನಾವರ ಹಾಗೂ ಕುಮಟಾದಲ್ಲಿ ಅಪಘಾತ ಸಂಭವಿಸಿದ ಬಗ್ಗೆ ವರದಿಯಾಗಿದ್ದು, ಅಪಘಾತದಲ್ಲಿ ಮಕ್ಕಳೂ ಸೇರಿ ಬೈಕ್ ನಲ್ಲಿ ಇದ್ದವರು ಗಾಯಗೊಂಡರೆ, ಕುಮಟಾದಲ್ಲಿ ಓರ್ವ ಸಾವನ್ನಪ್ಪಿದ ಬಗ್ಗೆ ತಿಳಿದುಬಂದಿದೆ. ಈ ಬಗ್ಗೆ ವಿವರ ಇಲ್ಲಿದೆ.
ಹೊನ್ನಾವರದಲ್ಲಿ ಘಟನೆ
ಹೊನ್ನಾವರ : ಕಾರು ಮತ್ತು ಬೈಕ್ ನಡುವೆ ಡಿಕ್ಕಿ ಸಂಭವಿಸಿ ಬೈಕ್ ನಲ್ಲಿದ್ದವರು ಗಂಭೀರ ಗಾಯಗೊಂಡ ಘಟನೆ ತಾಲೂಕಿನ ರಾಷ್ಟ್ರೀಯ ಹೆದ್ದಾರಿ 69ರ ಭಾಸ್ಕರಿಯ ವರ್ನಕೇರಿ ತಿರುವು ಬಳಿ ನಡೆದಿದೆ. ಕುಂದಾಪುರ ಮೂಲದ ಪ್ರಸುತ್ತ ಕಾಸರಕೋಡದಲ್ಲಿ ವಾಸ್ತವ್ಯ ಇರುವ ಆರೋಪಿತ ಕಾರ್ ಚಾಲಕ ರಾಘವೇಂದ್ರ ಮೇಸ್ತ ಎಂದು ಗುರುತಿಸಲಾಗಿದೆ.
ಅಪಘಾತದ ರಭಸಕ್ಕೆ ಬೈಕ್ ಜಖಂಗೊಂಡು ರಸ್ತೆಪಕ್ಕದ ಹೊಂಡಕ್ಕೆ ಬಿದ್ದಿದೆ. ಬೈಕ್ ಸವಾರ ಮಂಜುನಾಥ ಗೌಡ, ಹಿಂಬದಿ ಕುಳಿತಿದ್ದ ಸವಿತಾ ಗೌಡ ಹಾಗೂ ಮಕ್ಕಳಾದ ಮಧುಶ್ರಿ ಗೌಡ, ಮಾನ್ಯಶ್ರೀಗೌಡಗೆ ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಹೊನ್ನಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕುಮಟಾದಲ್ಲಿ ಅಪಘಾತ
ಕುಮಟಾ : ಕಳೆದ ಕೆಲ ವರ್ಷಗಳಿಂದ ಅನಾರೋಗ್ಯಕ್ಕೆ ಒಳಗಾಗಿದ್ದ ವ್ಯಕ್ತಿಯೋರ್ವ ರಸ್ತೆಯಲ್ಲಿ ಬಿದ್ದು ಸಾವನ್ನಪ್ಪಿರುವ ಘಟನೆ ಕುಮಟಾ ತಾಲೂಕಿನ ಸಿದ್ದನಬಾವಿ ಬಳಿ ನಡೆದಿದೆ. ಘಟನೆಯಲ್ಲಿ ಸುಬ್ರಮಣ್ಯಸ್ವಾಮಿ (60) ಮೃತಪಟ್ಟ ವ್ಯಕ್ತಿಯಾಗಿದ್ದಾನೆ. ಕಳೆದ ಏಳು ವರ್ಷಗಳಿಂದ ಅನಾರೋಗ್ಯದಲ್ಲಿದ್ದ ಎನ್ನಲಾಗಿದೆ. ಚಿಕಿತ್ಸೆಗೆ ಒಳಗಾಗಿದ್ದ. ಅಲ್ಲದೆ, ವಿಪರೀತ ಕುಡಿತದ ಚಟಕ್ಕೆ ದಾಸನಾಗಿದ್ದ. ಈತ ಹೊಸ ಬಸ್ ನಿಲ್ದಾಣದ ಬಳಿ ಬಿದ್ದು ಮೃತಪಟ್ಟಿದ್ದಾನೆ. ಕುಮಟಾ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.