ಅಂಕೋಲಾ: ಬಾಲಕಿ ಶ್ರೀಲಕ್ಷ್ಮೀ ಸಮಯ ಪ್ರಜ್ಞೆಯಿಂದಾಗಿ ಮನೆಯಲ್ಲಿ ನಡೆದುಹೋಗುತ್ತಿದ್ದ ಭಾರೀ ಅನಾಹುತವೊಂದು ತಪ್ಪಿದ ಘಟನೆ ಗುಡಿಗಾರ ಗಲ್ಲಿಯಲ್ಲಿ ನಡೆದಿದೆ. ಶ್ರೀಲಕ್ಷ್ಮೀ ನಾಗರಾಜ ಜಾಂಬಳೇಕರ ತಾಯಿಯ ಜೊತೆ ತನ್ನ ದೊಡ್ಡಮ್ಮನ ಮನೆಯಲ್ಲಿದ್ದಳು. ರಾತ್ರಿ 10 ಗಂಟೆಗೆ ಏಕಾಏಕಿ ಶಾರ್ಟ್ ಸಕ್ರ್ಯೂಟ್‍ನಿಂದ ರೆಫ್ರಿಜರೇಟರ್ ಸ್ಟ್ಯಾಬಿಲೈಸರ ಬೆಂಕಿ ಹತ್ತಿ ಉರಿಯತೊಡಗಿ ಫ್ರಿಜ್ಜಿಗೆ ಬೆಂಕಿ ಆವರಿಸಿದೆ. ಅಲ್ಲದೇ, ಪಕ್ಕದಲ್ಲೇ ಎರಡು ತುಂಬಿದ ಗ್ಯಾಸ್ ಸಿಲಿಂಡರ್ ಇದ್ದವು.
ಈ ಸಂದರ್ಭದಲ್ಲಿ ಬಾಲಕಿಯ ತಾಯಿ, ಅಜ್ಜಿ ಮತ್ತು ದೊಡ್ಡಮ್ಮ ಮಾತ್ರ ಇದ್ದರು. ಅವರು ನೀರು ಹಾಕಿ ಬೆಂಕಿಯನ್ನು ನಂದಿಸಲು ಮುಂದಾದಾಗ ಬಾಲಕಿ ಅವರನ್ನು ತಡೆದು, ಹೊರಗೋಡಿ ಕಟ್ಟಿಗೆ ತಂದು, ಖುರ್ಚಿ ಏರಿ ಮೇನ್ ಸ್ವಿಚ್ ಆಫ್ ಮಾಡುವ ಮೂಲಕ ಸಂಭವಿಸಬಹುದಾದ ಭಾರಿ ಅನಾಹುತವೊಂದನ್ನು ತಪ್ಪಿಸಿದ್ದಾಳೆ. ಈ ಬಾಲಕಿಯ ಸಾಹಸ ಹಾಗೂ ಸಮಯ ಪ್ರಜ್ಞೆಗೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.