ಬೆಂಗಳೂರು: ನಗರದಲ್ಲಿ ಮಳೆಯಿಂದ ಹಾನಿಗೀಡಾದ ಪ್ರದೇಶಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ನಿನ್ನೆ ಭೇಟಿ ನೀಡಿದ ಸಂದರ್ಭದಲ್ಲಿ ಬಿಎಂಟಿಸಿ ಬಸ್ಸುಗಳ ಕಳಪೆ ನಿರ್ವಹಣೆ ಮತ್ತು ನಗರದ ಟ್ರಾಫಿಕ್ ಜಾಮ್ ನ ನಿಜ ದರ್ಶನ ಅವರಿಗಾಯಿತು. ಅನಿವಾರ್ಯವಾಗಿ ಅವರು ನಗರ ದರ್ಶನವನ್ನು ಅರ್ಧದಲ್ಲಿಯೇ ಮೊಟಕುಗೊಳಿಸಿ ವಾಪಾಸಾಗಬೇಕಾಯಿತು.
ಬೆಂಗಳೂರು ಸಿಟಿ ಪ್ರವಾಸಕ್ಕೆಂದು ಇರುವ ಬಸ್ಸಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಸಂಪುಟದ ಕೆಲವು ಸಹೋದ್ಯೋಗಿಗಳು, ಪಕ್ಷದ ಕಾರ್ಯಕರ್ತರು, ಅಧಿಕಾರಿಗಳೊಂದಿಗೆ ನಗರ ಭೇಟಿಗೆಂದು ಹೊರಟಿದ್ದರು. ಸಿಎಂ ಜೊತೆಗೆ ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್, ನಗರಾಭಿವೃದ್ಧಿ ಸಚಿವ ಆರ್.ರೋಶನ್ ಬೇಗ್, ಗೃಹ ಸಚಿವ ರಾಮಲಿಂಗಾ ರೆಡ್ಡಿ, ಸಾರಿಗೆ ಸಚಿವ ಹೆಚ್.ಎಂ.ರೇವಣ್ಣ, ಮೇಯರ್ ಜಿ. ಪದ್ಮಾವತಿ ಬಿಬಿಎಂಪಿ ಆಯುಕ್ತ ಎನ್. ಮಂಜುನಾಥ್ ಪ್ರಸಾದ್ ಮತ್ತು ಬಿಡಬ್ಲ್ಯುಎಸ್ಎಸ್ ಬಿ ಅಧ್ಯಕ್ಷ ತುಶಾರ್ ಗಿರಿನಾಥ್ ಇದ್ದರು.
ಗೃಹ ಕಚೇರಿ ಕೃಷ್ಣಾದಿಂದ ಮುಖ್ಯಮಂತ್ರಿಗಳು ಕುಳಿತ ಬಸ್ಸು ಹೊರಟ ತಕ್ಷಣ ಬಸ್ಸಿನ ಹವಾನಿಯಂತ್ರಿತದಲ್ಲಿ ಏನೋ ತೊಂದರೆಯಿದೆ ಎಂದು ಅಧಿಕಾರಿಗಳಿಗೆ ಮನವರಿಕೆಯಾಯಿತು. ಆದರೆ ಆ ಹೊತ್ತಿನಲ್ಲಿ ಏನು ಮಾಡಲು ಸಾಧ್ಯವಿರಲಿಲ್ಲ. ಹವಾನಿಯಂತ್ರಿತ ಸೌಲಭ್ಯ ಕೆಲಸ ಮಾಡದೆ ಬಸ್ಸಿನ ಒಳಗೆ ಬಿಸಿಗೆ ಮುಖ್ಯಮಂತ್ರಿ, ಸಚಿವರು ಮತ್ತು ಅಧಿಕಾರಿಗಳು ಬೆವತು ಹೋದರು.
ಬಸ್ಸು ಜೆ.ಸಿ.ರಸ್ತೆಗೆ ಬರುವ ಹೊತ್ತಿಗೆ ಕೆಲವು ಅಧಿಕಾರಿಗಳು ಇನ್ನೊಂದು ಬಸ್ಸಿಗೆ ಹತ್ತಿದರು. ಆ ಬಸ್ಸು ಅಧಿಕಾರಿಗಳು ಮತ್ತು ಪತ್ರಕರ್ತರಿಗಾಗಿ ಇತ್ತು. ಆದರೆ ಈ ಬಸ್ಸಿನಲ್ಲಿ ಕುಳಿತಿದ್ದ ಮುಖ್ಯಮಂತ್ರಿ ಹಾಗೂ ಇತರ ಸಚಿವರು ಶಾಂತಿನಗರ ಬಸ್ ಡಿಪೊಗೆ ಬರುವವರೆಗೆ ಸೆಖೆಯನ್ನು ಅನುಭವಿಸಬೇಕಾಯಿತು. ಅಲ್ಲಿಂದ ನಂತರ ಇನ್ನೊಂದು ಬಸ್ಸಿನಲ್ಲಿ ತೆರಳಿದರು. ಆ ಬಸ್ಸು ಕೂಡ ಅಲ್ಲಿಂದ ಹೊರಟಾಗ ಸರಿಯಾಗಿತ್ತು.
ಹೊಸೂರು ರಸ್ತೆ ತಲುಪುವ ಹೊತ್ತಿಗೆ ಸಿಲ್ಕ್ ಬೋರ್ಡ್ ಜಂಕ್ಷನ್ ನಲ್ಲಿ ಸಂಚಾರ ದಟ್ಟಣೆ ತೀವ್ರವಾಗಿತ್ತು. ರಾಮಮೂರ್ತಿ ನಗರ ತಲುಪುವ ಹೊತ್ತಿಗೆ ಮತ್ತೆ ಬಸ್ಸು ಕೆಟ್ಟು ಹೋಗಿ ನಿಂತಿತು. ಅಲ್ಲಿ ಸುಮಾರು 20 ನಿಮಿಷ ಕಾದರು. ಆದರೆ ದುರಸ್ತಿಯಾಗದ ಹಿನ್ನೆಲೆಯಲ್ಲಿ ಅಲ್ಲಿ ತಡವಾಗಿದ್ದರಿಂದ ಕಲ್ಕೆರೆಗೆ ಹೋಗದೆ ತಮ್ಮ ತಮ್ಮ ಕಾರುಗಳಲ್ಲಿ ಮುಖ್ಯಮಂತ್ರಿ ಮತ್ತು ಸಚಿವರು ತೆರಳಿದರು