ಯಕ್ಷಕಾಶಿ ಗುಂಡಬಾಳ ಮೇಳದಲ್ಲಿ ಯಕ್ಷಗಾನ ಕಲಾವಿದರಾಗಿ ಸುಮಾರು ಹತ್ತು ವರ್ಷಗಳ ಕಾಲ ಅನುಭವ ಪಡೆದ ನಂತರ ಮೂರು ದಶಕಗಳ ಕಾಲ ದಕ್ಷಿಣೋತ್ತರ ಕನ್ನಡದ ಎಲ್ಲಾ ನಾಮಾಂಕಿತ ಮೇಳಗಳಲ್ಲಿ ನಾಯಕ ಮತ್ತು ಪ್ರತಿನಾಯಕ ಪಾತ್ರಧಾರಿಯಾಗಿ ಶ್ರೀ ಶ್ರೀಪಾದ ಹೆಗಡೆ ಹಡಿನಬಾಳ ಇವರು ತಮ್ಮದೇ ಆದ ಕಲಾಪ್ರೌಢಿಮೆ ಮೆರೆದು ಜನಮನ್ನಣೆಗಳಿಸಿದ್ದರು. ಎಂದು ವಿಶ್ರಾಂತ ಪ್ರಾಚಾರ್ಯ ಶ್ರೀ ಎಸ್.ಜಿ. ಭಟ್ಟ ಕಬ್ಬಿನಗದ್ದೆ ಅಭಿಪ್ರಾಯಪಟ್ಟರು. ಅವರು ನಿನ್ನೆ ಶ್ರೀಯುತರ ಮನೆಯಂಗಳದಲ್ಲಿ ನಡೆದ ಸಂಸ್ಮರಣೆ ಕಾರ್ಯಕ್ರಮದಲ್ಲಿ ಶ್ರೀಪಾದ ಹೆಗಡೆಯವರ ಯಕ್ಷ ಬದುಕಿನ ಕುರಿತು ಮಾತನಾಡುತ್ತಿದ್ದರು.
ರಾಜ್ಯ ಪ್ರಶಸ್ತಿ ಪುರುಸ್ಕøತ ಯಕ್ಷಗಾನ ಕಲಾವಿದ ದಿವಂಗತ ಶ್ರೀಪಾದ ಹೆಗಡೆ ಹಡಿನಬಾಳ ಇವರು ಖ್ಯಾತ ಯಕ್ಷಗಾನ ಕಲಾವಿದರಾಗಿ ಮತ್ತು ಗಣಪತಿ ವಿಗ್ರಹ ತಯಾರಕರಾಗಿ ಸಾಕಷ್ಟು ಜನಪ್ರಿಯರಾಗಿದ್ದರು. ಆಂಜನೇಯ, ರಾವಣ, ದಕ್ಷ, ವಿಶ್ವಾಮಿತ್ರ, ಭೀಮ, ಅರ್ಜುನ, ಕಂಸ ಹೀಗೆ ಅನೇಕ ನಾಯಕ ಮತ್ತು ಪ್ರತಿ ನಾಯಕ ಪಾತ್ರಧಾರಿಯಾಗಿ ಸುಮಾರು ಮೂರು ದಶಕಗಳ ಕಾಲ ದಕ್ಷಿಣೋತ್ತರ ಕನ್ನಡದ ಎಲ್ಲ ನಾಮಾಂಕಿತ ಮೇಳಗಳಲ್ಲಿ ಸೇವೆ ಸಲ್ಲಿಸಿದ್ದರು. ಕೆರೆಮನೆ ಮೇಳದ ಮುಖ್ಯ ವೇಷ್ಯಧಾರಿಯಾಗಿ ದೇಶವಿದೇಶಗಳಲ್ಲಿ ತನ್ನ ಕಲಾ ಪ್ರೌಢಿಮೆಯ ಮೂಲಕ ಹೆಸರು ಮಾಡಿದ್ದರು. ಆರಂಭದ ದಿನಗಳಲ್ಲಿ ತನ್ನ ಮಾವ ದಿವಂಗತ ಸತ್ಯ ಹೆಗಡೆ ಹಡಿನಬಾಳ ಇವರು ನಡೆಸುತ್ತಿದ್ದ ಗುಂಡಬಾಳ ಮೇಳದಲ್ಲಿ ಸುಮಾರು ಹತ್ತು ವರ್ಷಗಳ ಕಾಲ ವಿವಿಧ ಪಾತ್ರಗಳನ್ನು ಮಾಡಿ ಅನುಭವ ಪಡೆದಿದ್ದರು. ಮಳೆಗಾಲದ ಬಿಡುವಿನ ಸಮಯ ನೂರಾರು ಗಣಪತಿ ವಿಗ್ರಹಗಳನ್ನು ತಯಾರಿಸುತ್ತಿದ್ದರು. ಎಂದು ಅತಿಥಿಗಳಾಗಿ ಮಾತನಾಡಿದ ಕೆ.ವಿ.ಹೆಗಡೆ ಶ್ರೀಪಾದ ಹೆಗಡೆಯವರ ಬದುಕಿನ ಸಂಕ್ಷಿಪ್ತ ಚಿತ್ರಣ ನೀಡಿದರು. ತನ್ನದೇ ಆದ ಕಲಾ ಬದುಕನ್ನು ರೂಪಿಸಿಕೊಂಡ ಶ್ರೀಪಾದ ಹೆಗಡೆಯವರು ಬೈಕ್ ಅಪಘಾತದಲ್ಲಿ ಬಲವಾಗಿ ತಲೆಗೆ ಪೆಟ್ಟು ಬಿದ್ದ ಪರಿಣಾಮ ದೀರ್ಘಕಾಲದ ಚಿಕಿತ್ಸೆಯು ಫಲಿಸದೇ ಸಾವನ್ನಪ್ಪಿ ಒಂದು ವರ್ಷ ಕಳೆದು ಶ್ರೀಯುತರ ಪುಣ್ಯ ತಿಥಿಯ ಸಂದರ್ಭ ಸಂಸ್ಮರಣಾ ಕಾರ್ಯಕ್ರಮ ಮತ್ತು ತಾಳಮದ್ದಲೆ ಕಾರ್ಯಕ್ರಮವನ್ನು ಸದ್ಗುರು ದಯಾಶ್ರೀತ ಯಕ್ಷಕೂಟ ಹಡಿನಬಾಳ ಇವರು ಕೊಂಡಾಕುಳಿಯ ಅವರ ಮನೆಯಂಗಳದಲ್ಲಿ ಏರ್ಪಡಿಸಿದ್ದರು.
ನಂತರ ಕರ್ಣಪರ್ವ ಎಂಬ ತಾಳಮದ್ದಲೆ ನಡೆಯಿತು. ಹಿಮ್ಮೇಳದಲ್ಲಿ ಶ್ರೀ ಗಣೇಶ ಯಾಜಿ ಇಡಗುಂಜಿ, ಗಣಪತಿ ಹೆಗಡೆ ಹಂದಿಮುಲ್ಲೆ, ಶ್ರಿ ಪಿ.ಕೆ ಹೆಗಡೆ ಹರಿಕೇರಿ ಮತ್ತು ಕುಮಾರ ಮಯೂರ ಸಹಕರಿಸಿದರು. ಮುಮ್ಮೇಳದಲ್ಲಿ ಶ್ರೀ ಎಸ್. ಎಂ. ಹೆಗಡೆ ಮುಡಾರೆ ಕರ್ಣನಾಗಿ, ಪ್ರೊಪೆಸರ್ ನಾರಾಯಣ ಹೆಗಡೆ ಉಡುಪಿ ಕೃಷ್ಣನಾಗಿ, ಶ್ರೀ ಜನಾರ್ಧನ ಶೆಟ್ಟಿ ಗಾಣಗೆರೆ ಕೌರವನಾಗಿ, ಶ್ರೀ ಪ್ರಭಾಕರ ಹೆಗಡೆ ಚಿಟ್ಟಾಣಿ ಅರ್ಜುನನಾಗಿ, ಶ್ರೀ ಈಶ್ವರ ಭಟ್ಟ ಅಂಸಳ್ಳಿ ಶಲ್ಯನಾಗಿ, ಶ್ರೀ ಗಣೇಶ ಹೆಗಡೆ ಶಿಗಡಿ ಅಶ್ವಸೇನನಾಗಿ, ಶ್ರೀ ಶ್ರೀಪಾದ ಭಟ್ಟ ಹಡಿನಬಾಳ ಬ್ರಾಹ್ಮಣನಾಗಿ ಪಾತ್ರ ನಿರ್ವಹಿಸಿದ್ದರು.
ದಿವಂಗತ ಶ್ರೀಪಾದ ಹೆಗಡೆಯವರ ಮಗ ಶ್ರೀಶ ಅತಿಥಿಗಳನ್ನು ಸ್ವಾಗತಿಸಿ, ನಂತರ ವಂದನಾರ್ಪಣೆ ಮಾಡಿದರು. ಶ್ರೀ ವಿಷ್ಣು ಹೆಗಡೆ ಹಡಿನಬಾಳ ಸ್ಮರಣಿಕೆಯನ್ನು ನೀಡಿ ಗೌರವಿಸಿದರು.
ಚಿತ್ರ ಮತ್ತು ವರದಿ : ಚಿತ್ರಭಾರತೀ