ಹೊನ್ನಾವರ : ಜನತೆಗೆ ಕೊಟ್ಟ ಮಾತಿನಂತೆ ಆಡಳಿತ ನಡೆಸುವ ಜನಪರ ಸರ್ಕಾರವಿದ್ದರೆ ಅದು ಕಾಂಗ್ರೆಸ್ ಪಕ್ಷದಿಂದ ಮಾತ್ರ ಸಾಧ್ಯ ಎಂದು ಉತ್ತರಕನ್ನಡ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹಾಗೂ ವಿಧಾನ ಪರಿಷತ್ ಅಭ್ಯರ್ಥಿ ಬೀಮಣ್ಣಾ ನಾಯ್ಕ ನುಡಿದರು. ಅವರು ಇಂದು ಹೊನ್ನಾವರ ಬ್ಲಾಕ್ ಕಾಂಗ್ರೆಸ್ ಸಮಿತಿ, ನಗರದ ಸೋಶಿಯಲ್ ಕ್ಲಬ್ ಸಭಾಭವನದಲ್ಲಿ ಕರ್ನಾಟಕ ವಿಧಾನ ಪರಿಷತ್ ಚುನಾವಣೆಯ ಪ್ರಚಾರಾರ್ಥ ಏರ್ಪಡಿಸಿದ ಕಾರ್ಯಕರ್ತರ ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಿದ್ದರು. ತಾಲೂಕು ಪಂಚಾಯತ ಮತ್ತು ಜಿಲ್ಲಾ ಪಂಚಾಯತ ಚುನಾವಣೆಯನ್ನು ಎದುರಿಸಲಾಗದೇ ವಿನಾಕಾರಣ ಮುಂದೂಡುತ್ತಿದೆ. ರಾಜ್ಯದ ಬಿ.ಜೆ.ಪಿ. ಸರ್ಕಾರ ಗ್ರಾಮಪಂಚಾಯತಗಳಿಗೆ ಬರುವ ಎಲ್ಲಾ ಅನುದಾನ ಗಳನ್ನು ಕಡಿತಗೊಳಿಸುತ್ತಿರುವುದು ಅವರ ಆಡಳಿತಕ್ಕೆ ಹಿಡಿದ ಕೈಗನ್ನಡಿ ಎಂದು ಆಪಾಧಿಸಿದರು. ಕಳೆದ 12 ವರ್ಷಗಳಿಂದ ಕಾಂಗ್ರೆಸ್ ಪಕ್ಷದ ನಾಯಕರ ಮಾರ್ಗದರ್ಶನದಲ್ಲಿ ಹಾಗೂ ಪಕ್ಷದ ಕಾರ್ಯಕರ್ತರ ಸಹಕಾರದಿಂದ ಪಕ್ಷವನ್ನು ತಳಮಟ್ಟದಿಂದ ಬೆಳೆಸಿದ್ದು, ಮುಂಬರುವ ದಿನಗಳಲ್ಲಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರಲು ನಾವೇಲ್ಲರೂ ಪರಿಶ್ರಮಿಸಬೇಕಾಗಿದೆ ಎಂದರು. ಕರ್ನಾಟಕ ವಿಧಾನ ಪರಿಷತ್ ಚುನಾವಣೆ 2021ರ ಸ್ಥಳೀಯ ಸಂಸ್ಥೆಗಳಿಂದ ನನ್ನನ್ನು ಕಾಂಗ್ರೆಸ್ ಪಕ್ಷ ಅಭ್ಯರ್ಥಿಯಾಗಿಸಿದ್ದು, ನಾನು ಆಯ್ಕೆಯಾಗಿ ಬಂದಲ್ಲಿ ಗ್ರಾಮ ಪಂಚಾಯತ ಮತ್ತು ಸ್ಥಳೀಯ ಜನಪ್ರತಿನಿಧಿಗಳ ಸಹಕಾರದಿಂದ ಜಿಲ್ಲೆಗೆ ಹೆಚ್ಚಿನ ಅನುಧಾನ ತಂದು ಜಿಲ್ಲೆಯನ್ನು ಅಭಿವೃದ್ಧಿ ಪಥದಲ್ಲಿ ಕೊಂಡೊಯ್ಯಲು ಹಗಲು ರಾತ್ರಿ ಪರಿಶ್ರಮಿಸುವುದಾಗಿ ಕಾರ್ಯಕರ್ತರಿಗೆ ಭರವಸೆ ನೀಡಿದರು.
ಹೊನ್ನಾವರ ಬ್ಲಾಕ್ ಕಾಂಗ್ರೆಸ್ ವೀಕ್ಷಕರಾಗಿ ಆಗಮಿಸಿದ ಜಿಲ್ಲಾ ಕಾಂಗ್ರೆಸ್ ಮುಖಂಡ ಹಾಗೂ ಮೀನುಗಾರ ದುರೀಣ ರಾಮಾ ಮೊಗೇರ ಮಾತನಾಡುತ್ತಾ ಬಿ.ಜೆ.ಪಿ. ಪಕ್ಷ ಮೀನುಗಾರರ ಬಗ್ಗೆ ಕೇವಲ ಮೊಸಳೆ ಕಣ್ಣೀರು ಸುರಿಸುತ್ತಿದ್ದು, ಮೀನುಗಾರರ ಸಮಸ್ಯೆ ಬಗೆಹರಿಸುವಲ್ಲಿ ಯಾವುದೇ ಕ್ರಮ ಕೈಗೊಳ್ಳದೇ ಕೇವಲ ಮೀನುಗಾರರ ಮತಕ್ಕಾಗಿ ಗಣಪತಿ ಉಳ್ವೇಕರರವರನ್ನು ವಿಧಾನ ಪರಿಷತ್ ಅಭ್ಯರ್ಥಿಯನ್ನಾಗಿಸಿದೆ ಎಂದರು. ನಾವೇಲ್ಲಾ ನೋಡಿದಂತೆ ಪರೇಶ ಮೇಸ್ತನ ಸಾವನ್ನು ಕೇವಲ ಮತಕ್ಕಾಗಿ ಉಪಯೋಗಿಸಿಕೊಂಡ ಬಿ.ಜೆ.ಪಿ. ಪಕ್ಷ ಕಳೆದ ನಾಲ್ಕು ವರ್ಷದಿಂದ ಪರೇಶನ ಕುಟುಂಬಕ್ಕೆ ನ್ಯಾಯ ನೀಡದೇ ನಡು ನೀರಿನಲ್ಲಿ ಕೈಬಿಟ್ಟಿದೆ ಎಂದು ಆಪಾದಿಸಿದರು.
ಮಾಜಿ ಶ್ರೀಮತಿ ಶಾರದಾ ಶೆಟ್ಟಿ ಮಾತನಾಡಿ ರಾಜ್ಯದ ಬಿ.ಜೆ.ಪಿ. ಸರ್ಕಾರ ಕೇವಲ ಭರವಸೆಯ ಸರ್ಕಾರವಾಗಿದ್ದು, ರಾಜ್ಯದ ಆಡಳಿತ ವ್ಯವಸ್ಥೆ ಅತ್ಯಂತ ಬೇಜವಾಬ್ದಾರಿಯಿಂದ ಕೂಡಿದೆ ಎಂದರು. ಹಿಂದಿನ ಸಿದ್ಧರಾಮಯ್ಯನವರ ನೇತೃತ್ವದ ಕಾಂಗ್ರೆಸ್ ಸರ್ಕಾರ ಜಾರಿಗೆ ತಂದ ಅನೇಕ ಜನಪರ ಅಭಿವೃದ್ಧಿ ಕಾಮಗಾರಿಗಳಿಗೆ ಇಂದಿನ ಬಿ.ಜೆ.ಪಿ. ಸರ್ಕಾರ ಮರು ಶಂಕುಸ್ಥಾಪನೆ ಮಾಡುವಂತಹ ಪರಿಸ್ಥಿತಿಗೆ ಇಳಿದಿದ್ದು ನಾಚಿಕೆಗೇಡಿತನದ ಸಂಗತಿ ಎಂದರು. ಕಾರಣ ವಿಧಾನ ಪರಿಷತ್ ಅಭ್ಯರ್ಥಿ ಶ್ರೀ ಬೀಮಣ್ಣಾ ನಾಯ್ಕ ರವರನ್ನು ಅತ್ಯಂತ ಬಹುಮತದಿಂದ ಆಯ್ಕೆ ಮಾಡಿ ವಿಧಾನ ಪರಿಷತ್ತಿಗೆ ಕಳುಹಿಸುವ ಜವಾಬ್ಧಾರಿ ನಮ್ಮೇಲ್ಲರದಾಗಿದ್ದು, ಜಿಲ್ಲೆಯಿಂದ ಅವರ ಆಯ್ಕೆ ಶತಃ ಸಿದ್ಧ ಎಂದರು. ಹೊನ್ನಾವರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಗದೀಪ ಎನ್. ತೆಂಗೇರಿ ಎಲ್ಲರನ್ನು ಸ್ವಾಗತಿಸಿ ಪ್ರಾಸ್ತವಿಕವಾಗಿ ಮಾತನಾಡಿದರು. ಕಾಂಗ್ರೆಸ್ ಸೇವಾದಳದ ಅಧ್ಯಕ್ಷ ಆರ್. ಎಚ್. ನಾಯ್ಕ, ಕಾಂಗ್ರೆಸ್ ಮುಖಂಡ ರವಿಕುಮಾರ ಶೆಟ್ಟಿ, ಜಿಲ್ಲಾ ಕಾಂಗ್ರೆಸ್ ಸದಸ್ಯ ಎಮ್.ಎನ್. ಸುಬ್ರಹ್ಮಣ್ಯ, ಕೆ.ಪಿ.ಸಿ.ಸಿ. ಸದಸ್ಯ ವಿನೋದ ನಾಯ್ಕ, ಜಿಲ್ಲಾ ವೀಕ್ಷಕ ಸಾವೇರ ಡಿಸೋಜಾ, ಹೊನ್ನಾವರ ಬ್ಲಾಕ್ ಕಾಂಗ್ರೆಸ್ ಹಿಂದುಳಿದ ವಿಭಾಗದ ಅಧ್ಯಕ್ಷ ಕೆ.ಎಚ್. ಗೌಡ, ಅಲ್ಪ ಸಂಖ್ಯಾತ ವಿಭಾಗದ ಅಧ್ಯಕ್ಷ ಜಿಕ್ರಿಯಾ ಶೇಖ್, ಪರಿಶಿಷ್ಟ ಜಾತಿ ವಿಭಾಗದ ಅಧ್ಯಕ್ಷ ಕೃಷ್ಣಾ ಹರಿಜನ, ನಗರ ಘಟಕದ ಅಧ್ಯಕ್ಷ ಕೇಶವ ಮೇಸ್ತ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಬ್ಲಾಕ್ ಕಾಂಗ್ರೆಸ್ ಕಾರ್ಯದರ್ಶಿ ಲಂಭೋದರ ನಾಯ್ಕ, ಕಾರ್ಯಕ್ರಮ ನಿರೂಪಿಸಿದರು. ಮಹಿಳಾ ಬ್ಲಾಕ್ ಕಾಂಗ್ರೆಸ್ ಅದ್ಯಕ್ಷೆ ಶ್ರೀಮತಿ ಪುಷ್ಪಾ ಮಹೇಶ ವಂದಿಸಿದರು.