ಬೆಂಗಳೂರು: ಬೆಂಗಳೂರಿನಲ್ಲಿಂದು ಸುದ್ದಿಗಾರರ ಜೊತೆ ಮಾತನಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಧಾರವಾಡದ ಎಸ್ ಡಿಎಂ ಮೆಡಿಕಲ್ ಕಾಲೇಜಿನಲ್ಲಿ ಕೊರೋನಾ ಕ್ಲಸ್ಟರ್ ರೂಪದಲ್ಲಿ ದೊಡ್ಡ ಪ್ರಮಾಣದಲ್ಲಿ ಬೆಳೆಯುತ್ತಿರುವುದರಿಂದ ಹೆಚ್ಚಿನ ಎಚ್ಚರಿಕೆಯ ಅವಶ್ಯಕತೆಯಿದೆ. ಈ ನಿಟ್ಟಿನಲ್ಲಿ ಮೆಡಿಕಲ್ ಕಾಲೇಜಿನ ಹಾಸ್ಟೆಲ್, ಕಾಲೇಜು ಸುತ್ತಮುತ್ತ ಕಂಟೈನ್ ಮೆಂಟ್ ವಲಯವನ್ನಾಗಿ ಮಾಡಿ ಅಲ್ಲಿ ಎಲ್ಲರಿಗೂ ಟೆಸ್ಟ್ ಮಾಡಿ ನಿರ್ಬಂಧ ಹೇರಿದ್ದೇವೆ ಎಂದು ಹೇಳಿದ್ದಾರೆ.ಎಸ್ ಡಿಎಂ ಕಾಲೇಜಿನ ವೈದ್ಯರು, ನರ್ಸ್ ಗಳು, ರೋಗಿಗಳನ್ನು ಕೂಡ ಪರೀಕ್ಷೆಗೊಳಪಡಿಸುತ್ತಿದ್ದೇವೆ. ಹೊರರೋಗಿ ವಿಭಾಗ(OPD)ವನ್ನು ಸಂಪೂರ್ಣವಾಗಿ ಸದ್ಯ ನಿಲ್ಲಿಸಲಾಗಿದೆ. ಅದೇ ರೀತಿ ಮೈಸೂರಿನಲ್ಲಿ ಕೂಡ ಕಂಟೈನ್ ಮೆಂಟ್ ಝೋನ್ ಮಾಡಿ ಕ್ರಮವನ್ನು ತೆಗೆದುಕೊಂಡಿದ್ದೇವೆ. ತೀವ್ರ ನಿಗಾದಲ್ಲಿರಿಸಿ ಬೆಳವಣಿಗೆಗಳನ್ನು ಗಮನಿಸುತ್ತಿದ್ದೇವೆ. ಕೊರೋನಾ ಪಾಸಿಟಿವ್ ಬಂದವರಿಗೆ ಚಿಕಿತ್ಸೆಯನ್ನು ಪ್ರಾರಂಭಿಸಲಾಗಿದೆ ಎಂದರು.
ಕೇರಳದಿಂದ ಬಂದವರಿಂದ ಕೊರೋನಾ ಪಾಸಿಟಿವ್ ಬಂದಿದೆ ಎಂದು ಮೇಲ್ನೋಟಕ್ಕೆ ಸ್ಪಷ್ಟವಾಗುತ್ತಿದ್ದು, ಕ್ಲಸ್ಟರ್ ಆಗಿರುವ ಕಡೆಯಲ್ಲಿ ಕೇರಳದಿಂದ ಬಂದಿರುವ ಪಾರಾಮೆಡಿಕಲ್ ಸಿಬ್ಬಂದಿಗಳು ಬಂದಿದ್ದಾರೆ. ಈ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ, ಮಡಿಕೇರಿ, ಚಾಮರಾಜನಗರ, ಮೈಸೂರುಗಳಲ್ಲಿ ಕೇರಳ ಗಡಿಭಾಗಗಳಲ್ಲಿ ಸಂಪೂರ್ಣವಾಗಿ ಎಚ್ಚರಿಕೆ ವಹಿಸಿ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಬೇಕೆಂದು, ಕಡ್ಡಾಯವಾಗಿ ಕೊರೋನಾ ಟೆಸ್ಟ್ ಮಾಡಿ ನೆಗೆಟಿವ್ ಇದ್ದರೆ ಮಾತ್ರ ಬಿಡಬೇಕೆಂದು, ಕೊರೋನಾ ಲಸಿಕೆಯ ಎರಡೂ ಡೋಸ್ ಗಳಾಗಿರಬೇಕೆಂದು, ಹಾಗೂ ಹಗಲು-ರಾತ್ರಿ ನಿಗಾ ಇರಿಸಲು, ಟೆಸ್ಟ್ ಗಳನ್ನು ಹೆಚ್ಚಿಸಲು ಸೂಚನೆಯನ್ನು ನೀಡಲಾಗಿದೆ, ರಾಜ್ಯದ ಗಡಿಜಿಲ್ಲೆಗಳಲ್ಲಿ ಸಂಪೂರ್ಣವಾಗಿ ತಪಾಸಣೆಗೆ ಒಳಪಡಿಸುವುದು, ವಿಶೇಷವಾಗಿ ಕೇರಳದಿಂದ 16 ದಿನಗಳಿಂದೇಚೆಗೆ ಬರುವವರನ್ನು ಕಡ್ಡಾಯವಾಗಿ ಮತ್ತೊಮ್ಮೆ ಪರೀಕ್ಷೆಗೊಳಪಡಿಸಲಾಗುತ್ತದೆ ಎಂದು ಮುಖ್ಯಮಂತ್ರಿಗಳು ತಿಳಿಸಿದರು.
ವಿಮಾನ ನಿಲ್ದಾಣಗಳು ಸೇರಿದಂತೆ ಕೆಲವು ಕಡೆಗಳಲ್ಲಿ ಕೊರೋನಾ ತಡೆಗೆ ತೀವ್ರ ನಿರ್ಬಂಧಗಳನ್ನು ಹಾಕಲಾಗಿದೆ. ಕೊರೋನಾ ಹೊಸತಳಿ ಓಮಿಕ್ರಾನ್ ಕಂಡುಬಂದಿರುವ ದೇಶಗಳಿಂದ ಬಂದವರನ್ನು ವಿಮಾನ ನಿಲ್ದಾಣಗಳಲ್ಲಿ ಶೇಕಡಾ 100ರಷ್ಟು ಟೆಸ್ಟ್ ಗೊಳಪಡಿಸಲಾಗುವುದು. ಟೆಸ್ಟ್ ನಲ್ಲಿ ನೆಗೆಟಿವ್ ಬಂದರೆ ಮಾತ್ರ ವಿಮಾನ ನಿಲ್ದಾಣದಿಂದ ಹೊರಗೆ ಬಿಡಬೇಕು ಎಂದು ಕಟ್ಟುನಿಟ್ಟು ಮಾಡಲಾಗಿದೆ. ಪಾಸಿಟಿವ್ ಬಂದವರನ್ನು ಕಂಟೈನ್ ಮೆಂಚ್ ಝೋನ್ ಗೆ ಬಿಟ್ಟು ಕ್ವಾರಂಟೈನ್ ಗೆ ಒಳಪಡಿಸಲಾಗುತ್ತದೆ ಎಂದರು. ಆರೋಗ್ಯ ವಲಯ ಕಾರ್ಯಕರ್ತರಿಗೆ ವಿಶೇಷವಾಗಿ ಬೂಸ್ಟರ್ ಡೋಸ್ ಗಳನ್ನು ನೀಡಲು ಅನುಮತಿ ನೀಡಲು ಮತ್ತು ತೀರ್ಮಾನ ತಿಳಿಸಲು ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ. ಇಡೀ ದೇಶಕ್ಕೆ ಕೇಂದ್ರ ಸರ್ಕಾರ ಇದನ್ನು ಜಾರಿಗೆ ತರಬೇಕಾಗಿದ್ದು, ಕೇಂದ್ರ ಸರ್ಕಾರ ಚಾಲನೆ ನೀಡಿದ ಕೂಡಲೇ ಮಾಡಲಾಗುವುದು, ಕೊರೋನಾ ಹೊಸ ರೂಪಾಂತರಿ ಕಂಡುಬಂದಿರುವ 3 ದೇಶಗಳಿಗೆ ವಿಮಾನ ಹಾರಾಟವನ್ನು ಸದ್ಯಕ್ಕೆ ನಿಷೇಧಿಸಲು ಮನವಿ ಸಲ್ಲಿಸಲಾಗಿದೆ ಎಂದರು.