ಕಾರವಾರ : ಶ್ರೀ ಸ್ವರ್ಣವಲ್ಲೀ ಸಂಸ್ಥಾನದವರ ಮಾರ್ಗದರ್ಶನ ಹಾಗೂ ಸಾನಿಧ್ಯದಲ್ಲಿ ರಾಜ್ಯಾದ್ಯಂತ ಹಮ್ಮಿಕೊಂಡ ಭಗವದ್ಗೀತಾ ಅಭಿಯಾನದ ಭಾಗವಾಗಿ ಕಾರವಾರದ ಜಿಲ್ಲಾ ಕಾರಾಗೃಹದಲ್ಲಿ ಸೋಮವಾರ ಗೀತಾ ಅಭಿಯಾನವನ್ನು ಹಮ್ಮಿಕೊಳ್ಳಲಾಗಿತ್ತು.
ಜಗತ್ತಿನ ಎಲ್ಲರೂ ಒಂದಲ್ಲ ಒಂದು ರೀತಿಯಲ್ಲಿ ಭಗವಂತನ ಬಂಧನದಲ್ಲಿಯೇ ಇದ್ದಾರೆ ಎಂದು ಸೋಂದಾ ಸ್ವರ್ಣವಲ್ಲೀ ಮಹಾ ಸಂಸ್ಥಾನದ ಶ್ರೀ ಗಂಗಾಧರೇಂದ್ರ ಸರಸ್ವತೀ ಸ್ವಾಮಿಗಳು ನುಡಿದರು. ಕಾರ್ಯಕ್ರಮದ ಸಾನ್ನಿಧ್ಯವಹಿಸಿ ಅವರು ಆಶೀರ್ವಚನ ನೀಡಿದರು. ತಿಳಿದೋ, ತಿಳಿಯದೆಯೋ ಕೆಲವು ತಪ್ಪು ಮಾಡಿ ಕೆಲವರು ಭೌತಿಕವಾಗಿ ಜೈಲಿನಲ್ಲಿ ಇರುವ ಸ್ಥಿತಿ ಇರಬಹುದು, ಆದರೆ, ಹೊರ ಜಗತ್ತಿನಲ್ಲಿರುವವರು ಸಾಂಸಾರಿಕ ಬಂಧನದಲ್ಲಿದ್ದಾರೆ. ಹಾಗಾಗಿ ಜೈಲು ಸೇರಿದ್ದೇನೆ ಎಂದು ಕೊರಗುವ ಬದಲು ಸಮಯವನ್ನು ಸದುಪಯೋಗಪಡಿಸಿಕೊಳ್ಳಿ. ಗ್ರಂಥಾಲಯದಲ್ಲಿರುವ ಪುಸ್ತಕ ಓದಿ ಎಂದು ಸಲಹೆ ನೀಡಿದರು.
ಮಹಾತ್ಮಾಗಾಂಧಿಜಿ ಮುಂತಾದ ಮಹಾತ್ಮರು ಜೈಲಿನಲ್ಲಿದ್ದುಕೊಂಡೇ ಪುಸ್ತಕ ಬರೆದಿದ್ದಾರೆ ಎಂದು ಉದಾಹರಿಸಿದರು.ಭಗವದ್ಗೀತೆಯಲ್ಲಿ ಎಲ್ಲಾ ತರಹದ ಸಮಸ್ಯೆಗಳಿಗೆ ಉತ್ತರವಿದೆ. ಪ್ರತಿ ದಿನ ಓದಿ ಅದರ ಅರ್ಥ ತಿಳಿದುಕೊಳ್ಳಿ ಎಂದು ವಿಚಾರಣಾಧೀನ ಕೈದಿಗಳಿಗೆ ತಿಳಿಸಿ, ಗೀತೆಯ 3ನೇ ಅಧ್ಯಾಯವನ್ನು ಬೋಧಿಸಿದರು.
ಗೀತೆಯ ಪುಸ್ತಕ ವಿತರಿಸಿದರು. ಕಾರಾಗೃಹ ಅಧಿಕ್ಷಕ ಈರಣ್ಣರಂಗಾಪುರ ಸ್ವಾಗತಿಸಿದರು. ಉತ್ತರ ಕನ್ನಡ ಜಿಲ್ಲಾ ಭಗವದ್ಗೀತಾ ಅಭಿಯಾನ ಸಮಿತಿಯ ಅಧ್ಯಕ್ಷ ಮುರಳೀಧರ ಪ್ರಭು ಪ್ರಾಸ್ತಾವಿಕವಾಗಿ ಮಾತನಾಡಿದರು. ವೈದ್ಯ ಡಾ. ಹೇಮಂತ ಕಾಮತ್ ಉಪನ್ಯಾಸ ನೀಡಿದರು. ಭಗವದ್ಗೀತಾ ಅಭಿಯಾನ ಸಮಿತಿಯ ಆನಂದು ನಾಯ್ಕ ವಂದಿಸಿದರು.