ಸಿದ್ದಾಪುರ: ಹಿರಿಯ ಪತ್ರಕರ್ತ, ಬರಹಗಾರ, ವಕೀಲ ರವೀಂದ್ರ ಭಟ್ ಬಳಗುಳಿ (58) ಕೆಲವು ಕಾಲದ ಅನಾರೋಗ್ಯದಿಂದ ಮಂಗಳವಾರ ಬೆಳಿಗ್ಗೆ ನಿಧನ ಹೊಂದಿದ್ದಾರೆ. ಅವರು ಪತ್ನಿ, ಓರ್ವ ಪುತ್ರ, ತಾಯಿ, ಸಹೋದರ ಹಿರಿಯ ಪತ್ರಕರ್ತ ಶಶಿಧರ ಭಟ್ ಹಾಗೂ ಅಪಾರ ಬಂಧು-ಬಳಗ, ಆತ್ಮೀಯರನ್ನು ಅಗಲಿದ್ದಾರೆ.
ಜನಮಾಧ್ಯಮ, ನಂತರ ಪ್ರಜಾವಾಣಿ ದಿನಪತ್ರಿಕೆಗಳಲ್ಲಿ ಸುದೀರ್ಘ ಕಾಲದಿಂದ ಸ್ಥಳೀಯ ವರದಿಗಾರರಾಗಿ ಕಾರ್ಯ ನಿರ್ವಹಿಸಿದ್ದ ರವೀಂದ್ರ ಭಟ್ ಕವಿತೆ, ಸಣ್ಣ ಕಥೆ ಪ್ರಾಕಾರದಲ್ಲಿ ಮಹತ್ವದ ಕೊಡುಗೆಗಳನ್ನು ನೀಡಿದ್ದರು. ಹೆಸರಾಂತ ನಾಟಕಕಾರ, ಸಾಮಾಜಿಕ ಕಾರ್ಯಕರ್ತ ದಿ|ವಿ.ಜಿ.ಭಟ್ಟರ ಮಗನಾಗಿ ತಂದೆಯ ಬದ್ದತೆ, ಆದರ್ಶಗಳನ್ನು ಮುಂದುವರಿಸಿಕೊಂಡು ಬಂದಿದ್ದರು. ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷರಾಗಿ, ಮಘೇಗಾರಿನ ಶ್ರೀ ಮಹಾಗಣಪತಿ ದೇವಾಲಯದ ಮೊಕ್ತೇಸರನಾಗಿ ಕಾರ್ಯನಿರ್ವಹಿಸಿದ್ದ ಅವರು ವಕೀಲ ವೃತ್ತಿಯಲ್ಲೂ ಉತ್ತಮ ಹೆಸರನ್ನು ಗಳಿಸಿದ್ದರು.