ಯಲ್ಲಾಪುರ: ಮಳೆಗಾಲ ಮುಗಿದರೂ ಉತ್ತರಕನ್ನಡದ ಜನರಿಗೆ ಮಳೆಯ ಕಾಟ ಮಾತ್ರ ತಪ್ಪಿಲ್ಲ. ಆಗಾಗ ಸುರಿವ ಮಳೆ ಹಾಗೂ ಬೀಸುವ ಗಾಳಿಗಳಿಂದ ಜನತೆ ತೊಂದರೆಗೆ ಸಿಲುಕಿರುವ ಘಟನೆ ಆಗಾಗ ವರದಿಯಾಗುತ್ತಿವೆ. ನಿನ್ನೆ ರಾತ್ರಿ ಸುರಿದ ಭಾರೀ ಮಳೆಗೆ ಉಮ್ಮಚ್ಗಿಯಲ್ಲಿ ಮನೆಯೊಂದು ಕುಸಿತಕ್ಕೊಳಗಾದ ಘಟನೆ ಕಳೆದ ಸಂಭವಿಸಿದೆ. ಉಮ್ಮಚ್ಗಿ ಕಾಲನಿಯ ನಾಣು ಮಂಜಾ ದೇವಡಿಗ ಎನ್ನುವವರಿಗೆ ಸೇರಿದ ಮನೆಯಾಗಿದ್ದು, ಕುಸಿತಕ್ಕೊಳಗಾದ ಸಂದರ್ಭದಲ್ಲಿ ಮನೆಯವರೆಲ್ಲ ಹೊರಗಿದ್ದರೆಂದು ತಿಳಿದು ಬಂದಿದೆ. ಮುಂಜಾಗ್ರತೆಯಾಗಿ ಮನೆಯಲ್ಲಿದ್ದ ವಸ್ತುಗಳನ್ನೆಲ್ಲ ಬೇರೆಡೆ ಸಾಗಿಸಿದ್ದರು.
ಮನೆ ಬಿದ್ದ ಸುದ್ದಿ ತಿಳಿದ ತಕ್ಷಣ ಉಮ್ಮಚ್ಗಿ ಗ್ರಾ.ಪಂ.ಸ್ಥಳೀಯ ಸದಸ್ಯ ಕುಪ್ಪಯ್ಯ ಪೂಜಾರಿ, ತುಡುಗುಣಿ ವಾರ್ಡ ಸದಸ್ಯ ಖೈತಾನ್ ಡಿಸೋಜ, ಗ.ರಾ.ಭಟ್ಟ, ಬಿ.ಜೆ.ಪಿ.ಮಹಾ ಶಕ್ತಿ ಕೇಂದ್ರದ ಅಧ್ಯಕ್ಷ ದತ್ತು ನಾಯ್ಕ, ಮಂಜುನಾಥ ಮೊಗೇರ ಉಮ್ಮಚ್ಗಿ, ರಾಜೇಶ ಪೂಜಾರಿ ಉಮ್ಮಚ್ಗಿ ಮೊದಲಾದವರು ಸ್ಥಳಕ್ಕೆ ಭೇಟಿ ನೀಡಿದರು. ವಿಲೇಜ್ ಅಕೌಂಟೆಂಟ್ ಸವಿತಾ ಭಜಂತ್ರಿ ಪಂಚನಾಮೆ ನಡೆಸಿ ಮನೆ ನೂರರಷ್ಟು ಹಾನಿಯಾಗಿರುವುದಾಗಿ ತಿಳಿಸಿದರು.