ಹೊನ್ನಾವರ : ಹಿಂದೂಗಳಿಗೆ ಮಾರ್ಗಶಿರ ಮಾಸದಲ್ಲಿ ಬರುವ ಚಂಪ ಷಷ್ಠಿ ತುಂಬಾ ವಿಶೇಷವಾದದ್ದು. ಚಂಪಾ ಷಷ್ಠಿಯನ್ನು ಕರ್ನಾಟಕ, ಮಹಾರಾಷ್ಟ್ರದಲ್ಲಿ ದೊಡ್ಡ ಹಬ್ಬವಾಗಿ ಆಚರಿಸುತ್ತಾರೆ. ಕಾರ್ತಿಕೇಯ, ಸ್ಕಂದ, ಮುರುಗನ್, ವೇಲನ್ ಕುಮಾರ್ ಹೀಗೆ ನಾನಾ ಹೆಸರಿನಿಂದ ಕರೆಯಲ್ಪಡುವ ಸುಬ್ರಹ್ಮಣ್ಯನ ಆರಾಧಿಸುವ ದಿನವೇ ಚಂಪಾ ಷಷ್ಠಿ. ಚಂಪಾ ಷಷ್ಠಿಯಂದು ಸುಬ್ರಹ್ಮಣ್ಯನ ಭಕ್ತರು ಆತನ ಜಪ ಮಾಡುತ್ತಾ ಹೋಮ, ವ್ರತೋಪವಾಸಾದಿ ಆಚರಣೆಗಳೊಡನೆ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಭೇಟಿ ನೀಡಿ ಧನ್ಯರಾಗುತ್ತಾರೆ. ಸುಬ್ರಹ್ಮಣ್ಯ ಸ್ವಾಮಿ ಒಲಿದರೆ ಎಲ್ಲವೂ ಒಳಿತಾಗುತ್ತದೆ, ಇನ್ನು ಸರ್ಪ ದೋಷ, ಮುಂತಾದ ಸಮಸ್ಯೆಯಿದ್ದರೆ ಸುಬ್ರಹ್ಮಣ್ಯನನ್ನು ಭಕ್ತಿಯಿಂದ ಪೂಜಿಸಿದರೆ ಎಲ್ಲಾ ಕಷ್ಟವೂ ದೂರವಾಗುವುದು.
ದಿನಾಂಕ 9/12/2021ರಂದು ಹೊನ್ನಾವರ ತಾಲೂಕಿನ ಪುರಾಣ ಪ್ರಸಿದ್ದ ಶ್ರೀ ಕ್ಷೇತ್ರ ಮುಗ್ವಾದ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಚಂಪಾಷಷ್ಠಿ ಉತ್ಸವ ನಡೆಯಲಿದೆ. ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರ, ಕುಡುಪು ಶ್ರೀ ಅನಂತಪ್ಮನಾಭ ದೇವಸ್ಥಾನ, ಪಾವಂಜೆ ಜ್ಞಾನಶಕ್ತಿ ಸುಬ್ರಹ್ಮಣ್ಯ ಕ್ಷೇತ್ರ, ನೀರುಮಾರ್ಗ ಮಾಣೂರು ಅನಂತಪದ್ಮನಾಭ ಸುಬ್ರಹ್ಮಣ್ಯ ದೇವಸ್ಥಾನ ಸೇರಿದಂತೆ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಡಿ.8ರಂದು ಪಂಚಮಿ, ನಾಳೆ ಷಷ್ಠಿ ಮಹೋತ್ಸವ ಸಂಭ್ರಮದಿಂದ ನಡೆಯಲಿದೆ.