ಕಾರವಾರ: ಕೆ.ಎಸ್.ಆರ್.ಟಿ.ಸಿ. ಬಸ್‌ನಲ್ಲಿ ಬಿದ್ದಿದ್ದ 12 ಗ್ರಾಂ. ತೂಕದ ಚಿನ್ನದ ಸರವನ್ನು ಅದರ ಮಾಲಿಕನನ್ನು ಹುಡುಕಿ ಆತನಿಗೆ ಒಪ್ಪಿಸಿ ಪ್ರಾಮಾಣಿಕತೆಯನ್ನು ಸಾರಿಗೆ ನಿರ್ವಾಹಕ ಶಂಕರ ಸದಾಶಿವ ಗೌರಕ್ಕನವರ ಮೆರೆದ ಘಟನೆ ಬೆಳಕಿಗೆ ಬಂದಿದೆ. ಮಂಗಳವಾರದಂದು ಮಧ್ಯಾಹ್ನದ ಕೆರವಡಿ-ಮಲ್ಲಾಪುರ ವರ್ಗದ ಬಸ್‌ನಲ್ಲಿ ಚಿನ್ನದ ಸರ ನಿರ್ವಾಹಕ/ ಚಾಲಕ ಶಂಕರರಿಗೆ ಸಿಕ್ಕಿದೆ. ಅದರ ಮಾಲೀಕರು ಯಾರು ಎಂದು ಆತ ಅನೇಕರನ್ನು ವಿಚಾರಿಸಿ, ಮಾಹಿತಿಯನ್ನು ಮೇಲಾಧಿಕಾರಿಯ ಗಮನಕ್ಕೆ ತಂದಿದ್ದಾರೆ.
ಆ ಚಿನ್ನದ ಸರ ಕಿನ್ನರ ಗ್ರಾಮದ ಧಿಗಾಳಿಯ ನಿವಾಸಿ ದಿವ್ಯಾ ಕೃಷ್ಣಾ ನಾಯ್ಕ ಎಂಬಾಕೆಗೆ ಸೇರಿದ್ದಾಗಿತ್ತು. ಆಕೆಯನ್ನು ಬಸ್ ಡಿಪೋಗೆ ಕರೆಯಿಸಿ, ಸರ ಆಕೆಯದೆ ಎಂದು ಖಚಿತ ಮಾಡಿಕೊಂಡ ನಂತರ ಪೊಲೀಸ್ ಠಾಣೆಯಲ್ಲಿ 12 ಗ್ರಾಂ ಚಿನ್ನದ ಸರವನ್ನು ಆಕೆಗೆ ಒಪ್ಪಿಸಲಾಗಿದೆ.
ಸುಮಾರು 50 ಸಾವಿರ ರು. ಮೌಲ್ಯದ ಚಿನ್ನದ ಸರ ಸಿಕ್ಕಿದರೂ, ಅದನ್ನು ಮೂಲ ಮಾಲಿಕರಿಗೆ ಒಪ್ಪಿಸುವ ಮೂಲಕ ಪ್ರಾಮಾಣಿಕತೆ ಮೆರೆದ ನಿರ್ವಾಹಕ ಶಂಕರ ಸದಾಶಿವ ಗೌರಕ್ಕನವರರ ಕಾರ್ಯಕ್ಕೆ ಸಾರ್ವಜನಿಕರಿಂದ ಪ್ರಶಂಸೆ ವ್ಯಕ್ತವಾಗಿದೆ.