ಬೆಂಗಳೂರು: ಹಿಂದಿ ದಿವಸ್ ಆಚರಣೆಗೆ ರಾಜ್ಯದಲ್ಲಿ ಭಾರಿ ವಿರೋಧ ವ್ಯಕ್ತವಾಗುತ್ತಿದೆ. ಸಾಮಾಜಿಕ ಜಾಲತಾಣ ಹಾಗೂ ಇತರೆಡೆ ಹಲವು ಕನ್ನಡಿಗರು ಹಿಂದಿ ಪ್ರಚಾರಕ್ಕೆ ನಡೆಸಿಕೊಂಡುಬಂದಿರುವ ಹಿಂದಿ ದಿವಸ್ ಕಾರ್ಯಕ್ರಮಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ.
ಟ್ವಿಟರಿಗರು #GOIStopHindiImposition ಹ್ಯಾಷ್ ಟ್ಯಾಗ್ ಹಾಕಿ ಹಿಂದಿ ಹೇರಿಕೆ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಹಿಂದಿ ವಿರೋಧಿ ಆಂದೋಲನವನ್ನೇ ಪ್ರಾರಂಭಿಸಲಾಗಿದೆ. ಬ್ಯಾಂಕ್ ವಲಯ ಸೇರಿದಂತೆ ಅನೇಕ ಕಡೆ ಸ್ಥಳೀಯ ಭಾಷೆಯನ್ನು ಕಡೆಗಣಿಸಿ ಹಿಂದಿ ಭಾಷೆಯನ್ನು ಬಳಸಲು ಕೇಂದ್ರ ಸರ್ಕಾರ ಹುನ್ನಾರ ನಡೆಸಿದೆ ಎಂದು ಅನೇಕ ಟ್ವಟರಿಗಳು ಅಭಿಪ್ರಾಯಪಟ್ಟಿದ್ದಾರೆ.
ಇದೇ ವೇಳೆ ರಾಷ್ಟ್ರಪತಿ ಕೂಡ ಬೆಂಗಳೂರು ಮೆಟ್ರೋನಲ್ಲಿ ಹಿಂದಿ ಬಳಕೆ ಖಂಡಿಸಿ ನಡೆದ ಪ್ರತಿಭಟನೆಯನ್ನು ಉಲ್ಲೇಖಿಸಿ ಹಿಂದಿ ಭಾಷಿಕರಿಗೆ ಬುದ್ಧಿ ಮಾತು ಹೇಳಿರುವುದು ಕೂಡ ಹಿಂದಿ ದಿವಸ್ ಗೆ ವ್ಯಕ್ತವಾಗುತ್ತಿರುವ ವಿರೋಧಕ್ಕೆ ಇಂಬು ನೀಡಿದೆ.
ಕೆಲವು ಮಂದಿ ಹಿಂದಿ ಹೇರಿಕೆ ಕುರಿತು ಚಿತ್ರರಂಗ ಸೇರಿದಂತೆ ಅನೇಕ ವಲಯಗಳು ಏಕೆ ವಿರೋಧಿಸುತ್ತಿಲ್ಲ ಎಂದು ಪ್ರಶ್ನಿಸುವ ಮೂಲ ಚಳವಳಿಗೆ ಪರೋಕ್ಷ ಆಹ್ವಾನ ನೀಡಿದ್ದಾರೆ.