ಯಲ್ಲಾಪುರ :ಕಾರ್ಮಿಕರಿಗೆ ರಾಜ್ಯದಾದ್ಯಂತ ಉಚಿತ ಬಸ್ ಪಾಸ್ ರಾಜ್ಯದ ಶ್ರಮಿಕ ವರ್ಗದ ಸಂಕ್ಷೇಮಕ್ಕೆ ಶ್ರಮಿಸುತ್ತಿರುವ ಕಾರ್ಮಿಕ ಇಲಾಖೆಯು ಇದೀಗ ಮತ್ತೊಂದು ಮಹತ್ವಾಕಾಂಕ್ಷಿ ಯೋಜನೆ ಜಾರಿಗೆ ಮುಂದಡಿ ಇರಿಸಿದೆ ಎಂದು ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ್ ತಿಳಿಸಿದ್ದಾರೆ. ಕೋವಿಡ್ 1 ಮತ್ತು 2ನೇ ಅಲೆ ವೇಳೆ ಸಹಾಯಧನ, ಆಹಾರಕಿಟ್, ಲಸಿಕೆ, ತಮ್ಮೂರುಗಳಿಗೆ ತೆರಳಲು ಸಾರಿಗೆ ವ್ಯವಸ್ಥೆ ಮಾಡಿದ್ದ ಇಲಾಖೆಯು ಇದೀಗ ಕಾರ್ಮಿಕರು ತಮ್ಮ ಕೆಲಸದ ಪ್ರದೇಶಗಳಿಗೆ ತೆರಳಲು ಅನುವಾಗುವಂತೆ ಉಚಿತ ಸಾರಿಗೆ ಸೇವೆ ಒದಗಿಸಲು ಮುಂದಡಿ ಇರಿಸಿದೆ. ಬೆಂಗಳೂರು ಮಹಾನಗರದಲ್ಲಿ ಈಗಾಗಲೇ ಈ ಉಚಿತ ಸೇವೆಯನ್ನು ಜಾರಿ ಮಾಡಿರುವ ಕಾರ್ಮಿಕ ಇಲಾಖೆಯ ಕಲ್ಯಾಣ ಮಂಡಳಿಯು ಈ ಯೋಜನೆಯನ್ನು ರಾಜ್ಯದಾದ್ಯಂತ ವಿಸ್ತರಿಸಲು ಮುಂದಡಿ ಇರಿಸಿದೆ.
ಈ ಸಂಬಂಧ ಸಾರಿಗೆ ಇಲಾಖೆ ಜತೆ ಹಲವಾರು ಸುತ್ತಿನ ಮಾತುಕತೆಗಳು ನಡೆದಿದ್ದು, ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ಈಗಾಗಲೇ ಈ ಯೋಜನೆಯನ್ನು ಜಾರಿಗೊಳಿಸಿದೆ. ದಿನ ನಿತ್ಯ ಕೂಲಿಗಾಗಿ ತೆರಳುವ ಕಟ್ಟಡ ಕಾರ್ಮಿಕರಿಗೆ ಈ ಯೋಜನೆ ಲಾಭಕಾರಿಯಾಗಿದ್ದು, ಪ್ರತಿ ನಿತ್ಯ ಅವರು ಕೆಲಸ ನಿರ್ವಹಣೆಗೆ ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶಕ್ಕೆ ತೆರಳಲು ಕನಿಷ್ಠ 150 ರಿಂದ 200 ರೂ. ವ್ಯಯಿಸಬೇಕಾದ ಪರಿಸ್ಥಿತಿ ಇದೆ, ಇದರಿಂದ ಅವರು ಪಡೆಯುವ ಕೂಲಿ ಮೊತ್ತದ ಬಹುಭಾಗವನ್ನು ಸಾರಿಗೆಗೆ ವ್ಯಯಿಸುತ್ತಿದ್ದರು. ಇದನ್ನು ಮನಗಂಡ ಸಚಿವ ಶಿವರಾಂ ಹೆಬ್ಬಾರ್, ಕಟ್ಟಡ ಕಾರ್ಮಿಕರ ಅನುಕೂಲಕ್ಕಾಗಿ ಉಚಿತ ಸಾರಿಗೆ ವ್ಯವಸ್ಥೆಯ ಯೋಜನೆಗೆ ಚಾಲನೆ ನೀಡಿದರು.
ಕಾರ್ಮಿಕ ಕಲ್ಯಾಣ ಮಂಡಳಿಯ ನೊಂದಾಯಿತ ಕಾರ್ಮಿಕರು ಈ ಯೋಜನೆ ಲಾಭ ಪಡೆಯಬಹುದಾಗಿದೆ ಎಂದು ಇಲಾಖೆ ತಿಳಿಸಿದೆ.
ಈಗಾಗಲೇ ಬೆಂಗಳೂರು ಮಹಾನಗರದಲ್ಲಿ ಜಾರಿ ಆಗಿರುವ ಉಚಿತ ಸಾರಿಗೆ ಸೇವೆಯನ್ನು ರಾಜ್ಯದಾದ್ಯಂತ ವಿಸ್ತರಣೆ ಮಾಡಲು ಕಾರ್ಮಿಕ ಸಚಿವ ಶಿವರಾಂ ಹೆಬ್ಬಾರ್ ಮುಂದಡಿ ಇರಿಸಿದ್ದು, ಈ ಸಂಬಂಧ ಸಾರಿಗೆ ಇಲಾಖೆ ಜತೆ ಹಲವು ಸುತ್ತಿನ ಮಾತುಕತೆ ನಡೆಸಿದ್ದಾರೆ.