ಬೆಂಗಳೂರು: ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಚುರುಕುಗೊಂಡಿದ್ದು ಇದೀಗ ಲಂಡನ್ ನಗರ ಪೊಲೀಸ್ ವ್ಯಪ್ತಿಗೆ ಸೇರಿದ ಸ್ಕಾಟ್ಲೆಂಡ್ ಯಾರ್ಡ್ ಪೊಲೀಸರ ನೆರವು ಪಡೆಯಲು ವಿಶೇಷ ತನಿಖಾ ದಳ ನಿರ್ಧರಿಸಿದೆ ಎಂದು ಮೂಲಗಳು ತಿಳಿಸಿವೆ.
ಹತ್ಯೆ ನಡೆದು ಹತ್ತು ದಿನಗಳು ಕಳೆದರೂ ಇನ್ನೂ ಯಾವುದೇ ರೀತಿಯ ಮಹತ್ತರ ಸುಳಿವು ಸಿಕ್ಕಿಲ್ಲ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಲಂಡನ್ ಪೊಲೀಸರ ನೆರವು ಪಡೆಯಲು ನಿರ್ಧರಿಸಲಾಗಿದೆ ಎಂದು ತಿಳಿದುಬಂದಿದೆ. ಅದಾಗಲೇ ಇಬ್ಬರು ಸಿಬ್ಬಂದಿ ಎಸ್’ಐಟಿ ಜೊತೆ ಕೈ ಜೋಡಿಸಿದ್ದಾರೆ ಎನ್ನಲಾಗಿದೆ.
ಈ ಹಿಂದೆ ಧಾರವಾಡದಲ್ಲಿ ನಡೆದ ಎಂ.ಎಂ.ಕಲಬುರ್ಗಿ ಹತ್ಯೆಯ ಸಂಬಂಧ ಪಿಸ್ತೂಲ್ ಮಾದರಿ ಬಗ್ಗೆ ತಿಳಿದುಕೊಳ್ಳಲು ಸ್ಕಾಟ್ಲೆಂಡ್ ಯಾರ್ಡ್ ಪೊಲೀಸರು ನೆರವಾಗಿದ್ದರು. ತನಿಖೆಯ ಭಾಗವಾಗಿ ಕೆಲವು ರೌಡಿಗಳನ್ನೂ ಸಹ ವಿಚಾರಣೆ ನಡೆಸಲಾಗಿದೆ. ಇವರಲ್ಲಿ, ರಾಮನಗರ ಜೈಲಿನಲ್ಲಿ ಬಂಧಿಯಾಗಿರುವ ಕುಣಿಗಲ್ ಗಿರಿ ಹಾಗೂ ಆತನ ಸಹಚರರು ಕೂಡ ಸೇರಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಹೊರರಾಜ್ಯದ ಹಂತಕರು ನಗರಕ್ಕೆ ಬಂದು ಈ ಕೃತ್ಯ ಎಸಗಿರಬಹುದು ಎಂಬ ಶಂಕೆ ದಟ್ಟವಾಗಿದೆ. ಅವರಿಗೆ ಕೆಲವು ಸ್ಥಳೀಯರೂ ಸಹ ನೆರವು ನೀಡಿರುವ ಸಾಧ್ಯತೆಗಳಿವೆ ಎಂದು ಹೇಳಲಾಗಿದೆ. ಹೊರ ರಾಜ್ಯದ ಹಂತಕರಿಗೆ ನಗರದ ಪರಿಚಯ ಇರುವುದು ಕಡಿಮೆ. ಆದ್ದರಿಂದ ಸ್ಥಳೀಯ ರೌಡಿಗಳ ನೆರವು ಪಡೆಯುವ ಸಾಧ್ಯತೆಗಳಿರುವ ಹಿನ್ನೆಲೆಯಲ್ಲಿ ಕೆಲವು ರೌಡಿ ಶೀಟರ್’ಗಳನ್ನು ವಿಚಾರಣೆ ನಡೆಸಿದ್ದಾರೆ ಎನ್ನಲಾಗಿದೆ.