ಸಾಗರ: ಸೌರ ಶಕ್ತಿಯ ಬಳಕೆ ಎಂದರೆ ಕೇವಲ ಬೆಳಕಲ್ಲ. ಸೂರ್ಯ ಶಕ್ತಿಯ ಬಳಕೆಯ ವಿಸ್ತಾರಕ್ಕೆ ಮುಂದಾಗಬೇಕು, ವಿಸ್ತಾರಗೊಳ್ಳಬೇಕು ಎಂದು ಸೆಲ್ಕೋ ಇಂಡಿಯಾದ ಸಿಇಓ ಮೋಹನ ಭಾಸ್ಕರ ಹೆಗಡೆ ಹೇಳಿದರು. ಅವರು ತಾಲೂಕಿನ ಭಾರತೀಯ ವಿಕಾಸ ಟ್ರಸ್ಟ್ ಹಾಗೂ ಸೆಲ್ಕೋ ಇಂಡಿಯಾ ಜತೆಯಾಗಿ ಸಿದ್ದಗೊಳಿಸಲಾದ ಸೌರ ಶಕ್ತಿ ಚಾಲಿತ ಯಕ್ಷಗಾನ ವೇಷ ಭೂಷಣಗಳ ತಯಾರಿಕಾ ಕೇಂದ್ರದ ಉದ್ಘಾಟನೆಯಲ್ಲಿ ಪಾಲ್ಗೊಂಡು ಮಾತನಾಡಿದರು. ಸೌರದ ಬೆಳಕು, ಶಕ್ತಿಗಳ ಜೊತೆಗೆ ಸೇವೆಯ ಸಂಸ್ಥೆಯಾಗಿ ಸೆಲ್ಕೋ ಸಂಸ್ಥೆ ಕಳೆದ ಎರಡುವರೆ ದಶಕಗಳಿಂದ ಕೆಲಸ ಮಾಡುತ್ತಿದೆ ಎಂದು ವಿವರಿಸಿದರು.
ಸೆಲ್ಕೋ ಮೊದಲ ಉದ್ದೇಶ ಮೊದಲು ಲಾಭವಲ್ಲ. ಸೇವೆ ಮುಖ್ಯ. ಲಾಭ ಆದರೆ ಅದನ್ನು ಸೇವೆಗೆ ಬಳಸುತ್ತೇವೆ. ಲಾಭ ಈ ಕಾರಣಕ್ಕೆ ಸಂಸ್ಥೆಗೆ ಬೇಕು. ಕೋವಿಡ್ ನಂತಹ ಸಂಕಷ್ಟದಲ್ಲೂ ಗ್ರಾಮೀಣ ಸೋಲಾರ್ ಸಂಸ್ಥೆಯಾಗಿ ಉಳಿದುಕೊಂಡಿದ್ದು ಗ್ರಾಮೀಣ ಸೇವೆಯ ಆದ್ಯತೆಯೇ ಕಾರಣ ಎಂದರು. ಸೆಲ್ಕೋ ಸಂಸ್ಥೆ ಹಳ್ಳಿ ಹಳ್ಳಿಯಲ್ಲಿ ಬೆಳಕು ಜನಜೀವನ ಬದಲಿಸಬಹುದು. ಸೌಕರ್ಯಗಳು ಮೊದಲು ಪಟ್ಟಣಗಳಿಗೆ ಬರುತ್ತದೆ. ಸೆಲ್ಕೋ ಮೊದಲು ಕೆಲಸ ಆರಂಭಿಸಿದ್ದು ಹಳ್ಳಿಗಳಲ್ಲೇ ಎಂದರು.
ಪ್ರಸಿದ್ದ ಯಕ್ಷಗಾನ ನಾಟ್ಯ ವಿನಾಯಕ ದೇವಸ್ಥಾನದ ಮೊಕ್ತೇಸರ ವಿನಾಯಕ ಹೆಗಡೆ ಕಲಗದ್ದೆ, ಸ್ವತಃ ಕಲಾವಿದನೇ ವೇಷ ಭೂಷಣ ಸಿದ್ದಗೊಳಿಸಿಬೇಕು. ಅದರಿಂದ ಕಲಾವಿದರ ಕಲಾ ಪ್ರದರ್ಶನಕ್ಕೆ ಅನುಕೂಲ ಆಗುತ್ತದೆ. ಸಮಾಜಕ್ಕೆ ಕೊಡುವವರು ಬೇಕು. ಕೊಡುವವರಿಗೆ ಯಾರಿಗೆ ಕೊಡಬೇಕು ಎಂಬುದು ತಿಳಿದರೆ ಅದು ಸಾರ್ಥಕ ಆಗುತ್ತದೆ ಎಂದರು.
ವಿದೂಷಿ ವಸುಧಾ ಶರ್ಮಾ, ಕಲಾವಿದರ ಭಾವನೆಗಳ ಜೊತೆಗೆ ಕುಸುರಿ ಕೆಲಸ ಮಾಡಿದರೆ ಬಳಕೆಗೆ ಅನುಕೂಲ ಆಗುತ್ತದೆ. ಕಲೆಯೇ ಹಾಗೇ ಒಬ್ಬರಿಂದ ಒಬ್ಬರನ್ನು ಸೇರಿಸುತ್ತ ಹೋಗುತ್ತದೆ. ಕಲೆ ಬೆಳೆಯುವದು ಕಲಾವಿದರಿಂದಲೇ ಎಂದರು. ಪತ್ರಕರ್ತ ರಾಘವೇಂದ್ರ ಬೆಟ್ಟಕೊಪ್ಪ, ಇಂತಹ ಕಲಾ ಕೌಶಲಿಗರಿಗೆ ಇಂಥ ನೆರವು ನೀಡುವ ಸಾಮಾಜಿಕ ಬದ್ದತೆಯ ಸಂಸ್ಥೆಯ ಕಾರ್ಯ ಶ್ಲಾಘನೀಯ ಎಂದರು.
ವೇದಿಕೆಯಲ್ಲಿ ಸೆಲ್ಕೋ ಡಿಜಿಎಂ ಗುರು ಪ್ರಕಾಶ ಶೆಟ್ಟಿ ಬಿ.ಪಿ, ಏರಿಯಾ ಮ್ಯಾನೇಜರ್ ಶೇಖರ ಶೆಟ್ಟಿ, ರಂಗನಾಥ ಬೆಳೆಯೂರು ಇತರರು ಇದ್ದರು. ಪ್ರಾರ್ಥನೆ ವೀಣಾ ರಾಮಮೂರ್ತಿ ನಡೆಸಿದರು. ಭಾರತೀಯ ವಿಕಾಸ ಟ್ರಸ್ಟನ ಮಾಸ್ಟರ ಟ್ರೇನರ್ ಸುಧೀರ ಕುಲಕರ್ಣಿ ಸ್ವಾಗತಿಸಿದರು. ರಾಘವೇಂದ್ರ ಆಚಾರ್ಯ ನಿರ್ವಹಿಸಿದರು. ಕೇಂದ್ರದ ಮುಖ್ಯಸ್ಥ ಸಂಜಯ ಬೆಳಿಯೂರು ವಂದಿಸಿದರು. ಇದಕ್ಕೂ ಮೊದಲು ಯಕ್ಷಗಾನ ವೇಷ ಭೂಷಣಗಳ ಪ್ರದರ್ಶನ, ಕರಕುಶಲಗಳ ಪ್ರದರ್ಶನ, ಸೌರ ಶಕ್ತಿಗಳಿಂದ ನಡೆಯುವ ಯಂತ್ರಗಳ ಪ್ರದರ್ಶನ ಕೂಡ ನಡೆಯಿತು.
ಕರಕುಶಲ, ಕಲಾವಿದರಿಗೆ ನೆರವಾಗುವ ನಾಗರೀಕ ಬದ್ದತೆ ಇರಬೇಕು : ಮೋಹನ ಹೆಗಡೆ, ಸಿಇಓ ಸೆಲ್ಕೋ ಇಂಡಿಯಾ
ಕಲಾವಿದನೇ ಅದರ ವೇಷ ಭೂಷಣಗಳ ಸಿದ್ದತೆಗೊಳಿಸಿದರೆ ಅದು ಕಲಾ ಪ್ರದರ್ಶನಕ್ಕೆ ಕಲಾವಿದರಿಗೆ ನೆರವಾಗುತ್ತದೆ. ಭಾರತೀಯ ವಿಕಾಸ ಟ್ರಸ್ಟ, ಸೆಲ್ಕೋ ಕೊಡುಗೆ ಅನನ್ಯ.
- ವಿನಾಯಕ ಹೆಗಡೆ ಕಲಗದ್ದೆ, ಕಲಾವಿದ