ಶಿರಸಿ : ಕರ್ನಾಟಕದ ತಿರುಪತಿ ಎಂದೇ ಖ್ಯಾತವಾಗಿರುವ ಮಂಜುಗುಣಿ ವೆಂಕಟರಮಣ ದೇವರ ರಥೋತ್ಸವವು ಕೊರೋನಾ ಕಾರಣದಿಂದ ಮುಂದೂಡಲ್ಪಟ್ಟಿತ್ತು, ಈ ರಥೋತ್ಸವವು ಭಕ್ತರ ಸಮ್ಮುಖದಲ್ಲಿ ಇಂದು ವಿಜೃಂಭಣೆಯಿಂದ ಜರುಗಿತು. ಕಳೆದ ವರ್ಷ ಚೈತ್ರಮಾಸದ ಹುಣ್ಣಿಮೆಯಂದು ನಡೆಯಬೇಕಿತ್ತು ಆದರೆ ಕರೋನಾ ಹಿನ್ನೆಲೆಯಲ್ಲಿ ಆಶ್ವೀಜ ಮಾಸದ ಹುಣ್ಣಿಮೆಯಂದು ರಥೋತ್ಸವ ನಡೆಸಲಾಯಿತು. ಪದ್ಮಾವತಿ ಹಾಗೂ ಲಕ್ಷ್ಮಿಯ ಸಮೇತ ವೆಂಕಟರಮಣ ದೇವರ ಉತ್ಸವ ಮೂರ್ತಿಗಳನ್ನು ಮುಂಜಾನೆ 6ಗಂಟೆಗೆ ಬ್ರಹ್ಮರಥದ ಬೆಳ್ಳಿಮಂಟಪದಲ್ಲಿ ಧಾರ್ಮಿಕ ಕೈಂಕರ್ಯಗಳೊಂದಿಗೆ ಸ್ಥಾಪಿಸಿ ಮಹಾಮಂಗಳರಾತಿ ಮಾಡಿ, ರಥದ ಗಾಲಿಗಳಿಗೆ ಕಾಯಿಗಳನ್ನು ಒಡೆದು ಹಣ್ಣು ಕಾಯಿ ಸಮರ್ಪಣೆ ಮಾಡಿದರು. ಬ್ರಹ್ಮರಥದಲ್ಲಿ ವಿರಾಜಮಾನರಾಗಿ ಕುಳಿತ ಅಲಂಕಾರಿಕ ಉತ್ಸವ ಮೂರ್ತಿಗಳ ದರ್ಶನ ಪಡೆದ ಸಾವಿರಾರು ಭಕ್ತಾದಿಗಳು ಭಕ್ತಿ ಸಾಗರದಲ್ಲಿ ಮಿಂದು ಪುಳಕಿತರಾದರು.

RELATED ARTICLES  ಜಿಲ್ಲೆಯಲ್ಲಿ ಇಂದು 9 ಜನರಿಗೆ ಕೊರೋನಾ ಪಾಸಿಟೀವ್

ಹರಕೆ ತೀರಿಸಲೆಂದು ದೂರದ ಊರುಗಳಿಂದ ನಸುಕಿನಲ್ಲೆ ಆಗಮಿಸಿದ ಭಕ್ತಾಧಿಗಳು ವೆಂಕಟೇಶ್ವನಿಗೆ ಬಹು ಪ್ರೀತಿಯ ಕಡಲೆ ಕಾಳುಗಳನ್ನು ಸಮರ್ಪಿಸಿ ಧನ್ಯತೆ ಭಾವ ಮೆರೆದರು. ಇನ್ನೂ ಹಲವರು ಹರಕೆ ಹೇಳಿಕೊಂಡಂತೆ ಬೆಳ್ಳಿ ಹಾಗೂ ಚಿನ್ನದ ಕಡಲೆಗಳನ್ನು ದೇವರಿಗೆ ಸಮರ್ಪಿಸಿದರು. ಬ್ರಹ್ಮರಥದ ಗಾಲಿಯ ಬಳಿ ಕುಡಿಬಾಳೆಯಲ್ಲಿ ಅಕ್ಕಿಯನ್ನು ಹರಡಿ ಶಿಶುಗಳನ್ನು ಮಲಗಿಸಿ ದೇವರಲ್ಲಿ ಮಗುವಿಗೆ ಒಳ್ಳೆಯದಾಗಲೆಂದು ಹತ್ತಾರು ಪಾಲಕರು ಬೇಡಿಕೊಂಡಿದ್ದು ವಿಶೇಷವಾಗಿತ್ತು. ಕೊರೋನಾ ನಿಯಮಾವಳಿಗಳ ಅನ್ವಯ ಎಲ್ಲಾ ಧಾರ್ಮಿಕ ಕಾರ್ಯಗಳನ್ನೂ ನಡೆಸಿದ್ದು ವಿಶೇಷವಾಗಿತ್ತು.

RELATED ARTICLES  ಕುಮಟಾ : ಎಪ್ರಿಲ್ ೨೯ ಬುಧವಾರದಿಂದ ಅಡಕೆ ವ್ಯಾಪಾರ ಪ್ರಾರಂಭ..!