ಸಿದ್ದಾಪುರ: ಉತ್ತರ ಕನ್ನಡದ ಒಂದಿಲ್ಲೊಂದು ತಾಲೂಕಿನಿಂದ ಆತ್ಮಹತ್ಯೆಯ ಪ್ರಕರಣಗಳು ವರದಿಯಾಗುತ್ತಿದ್ದು ಆತ್ಮಹತ್ಯೆ ಪ್ರಕರಣಗಳ ಸರಣಿ ಮತ್ತೆ ಮುಂದುವರೆದಿದೆ. ಮದುವೆ ಖರ್ಚಿಗೆ ಹಣದ ಸಮಸ್ಯೆ ಇಲ್ಲವೇ ಇನ್ಯಾವುದೋ ವಿಷಯವನ್ನು ಮನಸ್ಸಿಗೆ ಹಚ್ಚಿಕೊಂಡು ವ್ಯಕ್ತಿಯೋರ್ವ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ತಾಲೂಕಿನ ಶಿರಗಳೆಯಲ್ಲಿ ನಡೆದಿದೆ.
ಧಾರವಾಡದಲ್ಲಿ ಹೋಟೆಲ್ ಉದ್ಯೋಗಿಯಾಗಿದ್ದ ಶಿರಗಳೆಯ ಮಹೇಶ ಮಂಜುನಾಥ ನಾಯ್ಕ ಈತನಿಗೆ ಲಗ್ನ ನಿಶ್ಚಯವಾಗಿತ್ತು. ಮದುವೆಗೆ ಹಣ ಹೊಂದಿಸುವ ಸಮಸ್ಯೆಯೂ ಆತನಿಗೆ ಎದುರಾಗಿತ್ತು ಎನ್ನಲಾಗಿದೆ. ರವಿವಾರ ತೋಟದ ಕೆಲಸಕ್ಕೆಂದು ಹೋದ ಆತನು ಮನೆಗೆ ಮರಳಿರಲಿಲ್ಲ.
ಮನೆಯವರು ಹುಡುಕುತ್ತಿರುವಾಗ ಸೋಮವಾರ ಬೆಳಿಗ್ಗೆ ಮನೆಯ ಹಿಂದಿನ ಬೆಟ್ಟದಲ್ಲಿ ಮರಕ್ಕೆ ನೇಣು ಹಾಕಿಕೊಂಡ ಸ್ಥಿತಿಯಲ್ಲಿ ಆತನ ದೇಹ ಕಂಡುಬಂದಿದ್ದು, ಈ ಕುರಿತು ಸಿದ್ದಾಪುರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.