ರಾಮಚಂದ್ರಾಪುರ ಮಠದ ವಿರುದ್ಧ ನಕಲೀ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ (ಪಿಐಎಲ್) ಹೂಡಿದವರ ಪರವಾಗಿ ವಾದಿಸಿ, ಇನ್ನು ಮುಂದೆ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಗಳಲ್ಲಿ ವಕೀಲರಾಗಿ ಹಾಜರಾಗದಂತೆ ಶಿಕ್ಷೆಗೊಳಗಾಗಿದ್ದ ವಕೀಲ ಕೆ ಎನ್ ಪ್ರವೀಣ್ ಕುಮಾರ್ ಸಲ್ಲಿಸಿದ್ದ ಮರುಪರಿಶೀಲನಾ ಅರ್ಜಿಯನ್ನು ರಾಜ್ಯ ಉಚ್ಚ ನ್ಯಾಯಾಲಯ ವಜಾಗೊಳಿಸಿದೆ.
ರಿಟ್ ಅರ್ಜಿ ಸಂಖ್ಯೆ 36998-2013ನ ಆದೇಶದ ಬಗ್ಗೆ ನ್ಯಾಯಾಲಯ ಮಧ್ಯ ಪ್ರವೇಶಿಸುವುದಿಲ್ಲವೆಂದು ಹೇಳಿದಾಗ ಪಿರ್ಯಾದುದಾರರು ಅರ್ಜಿಯನ್ನು ವಾಪಾಸ್ ಪಡೆದಿದ್ದರಿಂದ ಉಚ್ಚನ್ಯಾಯಾಲಯ ಅರ್ಜಿಯನ್ನು ಇತ್ಯರ್ಥಗೊಳಿಸಿದೆ.
ಪ್ರಕರಣದ ಹಿನ್ನಲೆ: ‘ಅಸ್ತ್ರ’ ಎಂಬ ಸರ್ಕಾರೇತರ ಸಂಸ್ಥೆಯ (NGO) ಎಕ್ಸಿಕೂಟೀವ್ ಡೈರಡಕ್ಟರ್ ಆದ ಚಂದನ್ ಎಮ್.ಸಿ ಎಂಬುವವರು ಹಾಗೂ ಗೋಕರ್ಣ ಹಿತರಕ್ಷಣಾ ಸಮಿತಿ ಜೊತೆ ಸೇರಿ ರಾಮಚಂದ್ರಾಪುರ ಮಠದ ಸ್ವಾಮೀಜಿ ಹಾಗೂ ಧರ್ಮಚಕ್ರ ಟ್ರಸ್ಟ್ ವಿರುದ್ದ ಉಚ್ಚ ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ ಜೂನ್ ತಿಂಗಳಲ್ಲಿ ದಾಖಲು ಮಾಡಿದ್ದರು.
ಈ ಪ್ರಕರಣ ವಿಚಾರಣೆ ಹಂತದಲ್ಲಿದ್ದ ಸಂದರ್ಭದಲ್ಲಿ ಪಿಐಎಲ್ ಪಿರ್ಯಾದುದಾರರಾದ ಚಂದನ್ ಎಮ್.ಸಿ. ಹಾಗೂ ಗೋಕರ್ಣ ಹಿತರಕ್ಷಣಾ ಸಮಿತಿ ಸದಸ್ಯರು, ರಾಮಚಂದ್ರಾಪುರ ಮಠದಲ್ಲಿ ಅವ್ಯವಹಾರ ನಡೆದಿದೆ ಎಂದು ಬೆದರಿಸಿ ಬ್ಲಾಕ್ ಮೇಲ್ ತಂತ್ರ ಬಳಸಿ ಹಣ ದೋಚಲು ಪ್ರಯತ್ನಿಸಿದ್ದರು.
ಪಿರ್ಯಾದುದಾರರು ಈ ಪಿಐಎಲ್ ಹಿಂದಕ್ಕೆ ಪಡೆಯಲು 5 ಕೋಟಿ ರೂಪಾಯಿಯ ಬೇಡಿಕೆ ಇಟ್ಟಿದ್ದರು. ಪೋಲೀಸರ ನಿರ್ದೇಶನದಂತೆ ಮಠದ ಪ್ರತಿನಿಧಿಗಳು ಅವರೊಡನೆ ಮಾತುಕತೆ ಮಾಡಿ, ಕೊನೆಗೆ ರೂ. 3.25 ಕೋಟಿಗೆ ಒಪ್ಪಿ, ಅದರಲ್ಲಿ ರೂ. 10 ಲಕ್ಷ ಮುಂಗಡ ಬಯಸಿದ್ದರು.
ಅವರನ್ನು ಸಾಕ್ಷಾಧಾರ ಸಹಿತ ಹಿಡಿಯಲು ಗಿರಿನಗರ ಪೋಲೀಸರು ಬೀಸಿದ ಬಲೆಯಲ್ಲಿ ಹಣ ಪಡೆಯುವಾಗಲೇ ಇವರು ಸಿಕ್ಕಿಬಿದ್ದಿದ್ದರು ಎಂದು ರಾಮಚಂದ್ರಾಪುರ ಮಠದ ಪ್ರಕಟಣೆಯಲ್ಲಿ ಹೇಳಲಾಗಿದೆ.
ತದನಂತರ ನಕಲೀ ಕೇಸು ದಾಖಲಿಸಿದ್ದಕ್ಕೆ ಪಿರ್ಯಾದುದಾರರಿಗೆ ಕೋರ್ಟ್ ದಂಡ ಶಿಕ್ಷೆ ವಿಧಿಸಿತ್ತು ಹಾಗೂ ಪಿರ್ಯಾದುದಾರ ವಕೀಲ ಕೆ ಎನ್ ಪ್ರವೀಣ್ ಕುಮಾರ್ ಇವರಿಗೆ ಇನ್ನು ಮುಂದೆ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಗಳಲ್ಲಿ ವಕೀಲನಾಗಿ ಹಾಜರಾಗದಂತೆ ನಿರ್ದೇಶಿಸಿತ್ತು.