ನ್ಯೂಯಾರ್ಕ್: ಕಾಶ್ಮೀರ ವಿವಾದವನ್ನು ಪದೇ ಪದೇ ವಿಶ್ವಸಂಸ್ಥೆಯಲ್ಲಿ ಪ್ರಸ್ತಾಪ ಮಾಡುತ್ತಿರುವ ಇಸ್ಲಾಮಿಕ್ ಸಹಕಾರ ಸಂಘಟನೆ (ಒಐಸಿ) ವಿರುದ್ಧ ಭಾರತ ತೀವ್ರವಾಗಿ ಕಿಡಿಕಾರಿದ್ದು, ಕಾಶ್ಮೀರ ವಿವಾದ ಭಾರತ ಆಂತರಿಕ ವಿಚಾರವಾಗಿದ್ದು, ನಮ್ಮ ಆಂತರಿಕ ವಿಚಾರದಲ್ಲಿ ಮೂಗು ತೂರಿಸುವ ಹಕ್ಕು ಒಐಸಿಗಿಲ್ಲ ಎಂದು ಶುಕ್ರವಾರ ಗುಡುಗಿದೆ.
ನಿನ್ನೆಯಷ್ಟೇ ವಿಶ್ವಸಂಸ್ಥೆಯಲ್ಲಿ ಕಾಶ್ಮೀರ ವಿವಾದವನ್ನು ಪ್ರಸ್ತಾಪ ಮಾಡಿದ್ದ ಒಐಸಿ, ಭಾರತದ ವಿರುದ್ಧ ಆರೋಪ ಮಾಡಿತ್ತು. ಜಮ್ಮು ಮತ್ತು ಕಾಶ್ಮೀರದಲ್ಲಿ ಭಾರತ ಮಾನವ ಹಕ್ಕುಗಳನ್ನು ಉಲ್ಲಂಘನೆ ಮಾಡುತ್ತಿದ್ದು, ಕಾಶ್ಮೀರಿಗರ ಸ್ವಯಂ ನಿರ್ಣಯದ ಹಕ್ಕುಗಳನ್ನು ಕಿತ್ತುಕೊಳ್ಳುತ್ತಿದೆ ಎಂದು ಆರೋಪಿಸಿತ್ತು.
ಈ ಆರೋಪವನ್ನು ಭಾರತ ತಳ್ಳಿಹಾಕಿದ್ದು, ಒಐಸಿ ವಿರುದ್ಧ ತೀವ್ರವಾಗಿ ಕಿಡಿಕಾರಿದೆ. ಒಐಸಿ ಆರೋಪ ಕುರಿತಂತೆ ವಿಶ್ವಸಂಸ್ಥೆಯ ಕಚೇರಿಯಲ್ಲಿ ಭಾರತದ ರಾಯಭಾರಿಯಾಗಿರುವ ಸುಮಿತ್ ಸೇಠ್ ಅವರು ಮಾತನಾಡಿ, ಇಸ್ಲಾಮಿಕ್ ಸಹಕಾರ ಸಂಘಟನೆ ಪರವಾಗಿ ಪಾಕಿಸ್ತಾನ ಮಾಡುತ್ತಿರುವ ಆರೋಪಕ್ಕೆ ಉತ್ತರ ನೀಡುವ ಹಕ್ಕು ಭಾರತಕ್ಕಿದೆ. ಜಮ್ಮು ಮತ್ತು ಕಾಶ್ಮೀರ ಭಾರತದ ಅವಿಭಾಜ್ಯ ಅಂಗ ಹಾಗೂ ಬೇರ್ಪಡಿಸಲಾಗದ ಭಾಗವಾಗಿದೆ. ಕಾಶ್ಮೀರ ವಿವಾದ ಭಾರತದ ಆಂತರಿಕ ವಿಚಾರವಾಗಿದ್ದು, ಈ ವಿಚಾರದಲ್ಲಿ ಒಐಸಿ ಮೂಗು ತೂರಿಸಬಾರದು. ಭವಿಷ್ಯದಲ್ಲಿ ಈ ರೀತಿಯ ಪ್ರಸ್ತಾಪವನ್ನು ಒಐಸಿ ಮಾಡಬಾರದೆಂದು ಸಲಹೆ ನೀಡುತ್ತೇವೆಂದು ಹೇಳಿದ್ದಾರೆ.
ಕಾಶ್ಮೀರ ವಿವಾದ ಕುರಿತು ಒಐಸಿ ಮಾಡುತ್ತಿರುವ ಆರೋಪಕ್ಕೆ ಭಾರತ ವಿಷಾದ ವ್ಯಕ್ತಪಡಿಸುತ್ತದೆ. ಒಐಸಿ ಆರೋಪ ವಾಸ್ತವತೆಗೆ ತದ್ವಿರುದ್ಧವಾಗಿದೆ. ಭಾರತದ ಅವಿಭಾಜ್ಯ ಅಂಗವಾಗಿರುವ ಜಮ್ಮು ಮತ್ತು ಕಾಶ್ಮೀರ ಕುರಿತಂತೆ ಒಐಸಿ ತಪ್ಪು ಮಾಹಿತಿಗಳನ್ನು ನೀಡುತ್ತಿದೆ ಎಂದು ತಿಳಿಸಿದ್ದಾರೆ.
RELATED ARTICLES  ಮಾಜಿ ಮುಖ್ಯಮಂತ್ರಿ ಎನ್. ಧರಂಸಿಂಗ್ ವಿಧಿವಶ