ಕೂಡಲಸಂಗಮ: ಡಾ.ಶರಣಪ್ರಕಾಶ ಪಾಟೀಲರ ಮನೆಯಲ್ಲಿ ವೀರಶೈವವಾದಿಗಳು ಮತ್ತು ಲಿಂಗಾಯತ ಧರ್ಮದ ಪ್ರತಿಪಾದಕರು ಸಭೆ ನಡೆಸಿದ್ದು, ಒಮ್ಮತ ರೂಪಿಸಿಲು ಅಥವಾ ನಿರ್ಣಯಿಸಲು ತಜ್ಞರ ಸಮಿತಿ ರಚಿಸಬೇಕೆಂಬ ನಿರ್ಧಾರಕ್ಕೆ ಬಂದಿರುವುದಾಗಿ ಪತ್ರಿಕೆಯಲ್ಲಿ ಪ್ರಕಟಿಸಲಾಗಿದೆ.ಇದಕ್ಕೆ ನಮ್ಮ ಸ್ಪಷ್ಟ ವಿರೋಧವಿದೆ ಎಂದು ಕೂಡಲಸಂಗಮ ಬಸವ ಧರ್ಮ ಪೀಠದ ಪೀಠಾಧ್ಯೆಕ್ಷೆ ಜಗದ್ಗುರು ಮಾತೆ ಮಹಾದೇವಿ ಪತ್ರಿಕಾ ಪ್ರಕಟಣೆ ನೀಡಿದ್ದಾರೆ.
ತಜ್ಞರ ಸಮಿತಿಯ ನಿರ್ಣಯಕ್ಕೆ ಬಸವ ತತ್ತ್ವ ಪ್ರಚಾರಕ ಸಂಘ ಸಂಸ್ಥೆಗಳಾವು ಬುದ್ಧವಾಗುವುದಿಲ್ಲ.ಯಾರು ತಜ್ಞರು ಎಂದು ಪ್ರಶ್ನಿಸಬೇಕಾಗುತ್ತದೆ.ನಿವೃತ್ತ ಐ.ಎ.ಎಸ್ ಅಧಿಕಾರಿ ಎಸ್.ಎಂ.ಜಾಮದಾರ್ ಲಿಂಗಾಯತ ಬಗ್ಗೆ ಅಧಿಕೃತ ದಾಖಲೆಗಳನ್ನು ನೀಡುತ್ತಿದ್ದಾರೆ. ಲಿಂಗಾಯತರು ಹಿಂದುಗಳಲ್ಲ, ಲಿಂಗಾಯತರು ವೀರಶೈವರಲ್ಲ ಎಂಬ ಬಗ್ಗೆ ಅಧಿಕೃತ ಅಧ್ಯಯನ ಮಾಡಿ ನಾನು ಪುಸ್ತಕಗಳನ್ನು ಬರೆದು ಪ್ರಕಟಿಸಿದ್ದೇನೆ. ರಂಜಾನ್ ದರ್ಗಾ ಈ ಬಗ್ಗೆ ಅಧಿಕೃತ ಅಧ್ಯಯನ ಮಾಡಿ ಸಾಕಷ್ಟು ಪುಸ್ತಕಗಳನ್ನು ಬರೆದಿದ್ದಾರೆ. ಸತ್ಯವನ್ನು ನಿರ್ಣಯಿಸಲು ಇವೇ ಸಾಕು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ತಿಪ್ಪಣ್ಣನವರ ಹೇಳಿಕೆಗೆ ಪ್ರತಿಕ್ರಿಯೆ:
ತಿಪ್ಪಣ್ಣನವರು ಕೇಂದ್ರದಲ್ಲಿ ಬಿಜಿಪಿ ಸರ್ಕಾರ ಇರುವುದರಿಂದ ವೀರಶೈವಕ್ಕಾಗಲಿ, ಲಿಂಗಾಯತಕ್ಕಾಗಲಿ ಮಾನ್ಯತೆ ದೊರಕುವುದಿಲ್ಲ ಎಂದು ಸವಾಲು ಹಾಕಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ವಿಚಾರವಂತರು, ಲೋಕ ಸಭೆಯಲ್ಲಿ ಸಾಕಷ್ಟು ಪ್ರಜ್ಞಾವಂತರು ಇರುತ್ತಾರೆ. ಆದ್ದರಿಂದ ಐತಿಹಾಸಿಕ ದಾಖಲೆಗಳಿರುವ ಲಿಂಗಾಯತಕ್ಕೆ ಜೈನ, ಬೌದ್ದ,ಸಿಖ್ ಧರ್ಮಗಳಿಗೆ ಇರುವಂತೆ ಸಾಂವಿಧಾನಿಕ ಮಾನ್ಯತೆ ಸಿಕ್ಕೇ ಸಿಗುವುದೆಂಬ ಭರವಸೆ ಇದೆ. ತಿಪ್ಪಣ್ಣನವರು ಈ ರೀತಿ ನಿರಾಸೆಯ ಮಾತನಾಡಿ ಜನರನ್ನು ದಾರಿ ತಪ್ಪಿಸಬಾರದೆಂದು ಮನವಿ ಮಾಡುತ್ತೇವೆ. ಅಂತಿಮವಾಗಿ ಕಾನೂನು ಮತ್ತು ಸುಪ್ರಿಂ ಕೋರ್ಟ್ ಇದ್ದೇ ಇದೆ, ನಾವು ಅದರ ಮೊರೆ ಹೋಗುತ್ತೇವೆ.
ಸಿದ್ಧಗಂಗಾ ಶ್ರೀಗಳ ಕುರಿತ ಹೇಳಿಕೆಗೆ ಸ್ಪಷ್ಟೀಕರಣ:
ಭಾರತ ರತ್ನ ಪ್ರಶಸ್ತಿ ಕುರಿತಂತೆ ನಾನು ಸಿದ್ದಗಂಗಾ ಶ್ರೀಗಳು ಆಮೀಷಕ್ಕೆ ಒಳಗಾಗಿದ್ದಾರೆಂದು ಹೇಳಿಲ್ಲ. ಅವರು ಎಲ್ಲ ಪ್ರಶಸ್ತಿಗಳಿಗೂ ಮೀರಿದವರು. ರಾಜಕೀಯ ಮುಖಂಡರು ಈ ವಿಷಯದಲ್ಲಿ ಆಮಿಷ ತೋರಿದ್ದಾರೆಂದು ಅವರ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದೇನೆ.ಇದನ್ನು ಜನರು ಅರ್ಥ ಮಾಡಿಕೊಳ್ಳಬೇಕು ಕೆಲವು ಮಾಧ್ಯಮಗಳು ತಪ್ಪು ತಪ್ಪಾಗಿ ನಿರೂಪಣೆ ಮಾಡಿ ಜನರನ್ನು ದಾರಿ ತಪ್ಪಿಸುತ್ತಿದ್ದಾರೆ ಎಂದು ಹೇಳದೆ ಗತ್ಯಂತರವಿಲ್ಲ ಎಂದು ಕಿಡಿಕಾರಿದ್ದಾರೆ.