ಭಾರತ ದೇಗುಲಗಳ ದೇಶ. ಇಲ್ಲಿ ಪ್ರತಿಯೊಂದು ದೇವಾಲಯಗಳದ್ದೂ ಒಂದೊಂದು ವಿಶಿಷ್ಟ್ಯ. ಪ್ರತಿಯೊಂದು ದೇವಾಲಯಗಳ ಹಿಂದೆಯೂ ಒಂದೊಂದು ಅಚ್ಚರಿಯ ಸಂಗತಿಗಳಿರುತ್ತವೆ. ಅಂಥಹದ್ದೇ ವಿಶೇಷ ಇರುವ ದೇವಾಲಯ ತಮಿಳುನಾಡಿನ ಕನ್ಯಾಕುಮಾರಿಯಲ್ಲಿದೆ.
ತ್ರಿಮೂರ್ತಿಗಳಾದ ಬ್ರಹ್ಮ ವಿಷ್ಣು ಮಹೇಶ್ವರನ ಸಾನ್ನಿಧ್ಯ ಒಟ್ಟಿಗೆ, ಒಂದೇ ದೇವಾಲಯದಲ್ಲಿ ಇರುವ ಉದಾಹರಣೆ ತೀರಾ ವಿರಳ. ಆದರೆ ಕನ್ಯಾಕುಮಾರಿಯ ಸುಚಿಂದ್ರಂನಲ್ಲಿರುವ ಸ್ಥಾನುಮಾಲಯನ್ ದೇವಸ್ಥಾನದಲ್ಲಿ ತ್ರಿಮೂರ್ತಿಗಳ ಸಾನ್ನಿಧ್ಯವೂ ಒಟ್ಟಿಗೆ ಇದ್ದು, ಲಿಂಗದಲ್ಲಿ ಬ್ರಹ್ಮ, ವಿಷ್ಣು ಮಹೇಶ್ವರರನ್ನು ಕಾಣಬಹುದಾಗಿದೆ ಎಂಬುದು ಮತ್ತೊಂದು ವಿಶೇಷತೆ.
ಒಂದೇ ಲಿಂಗದಲ್ಲಿ ತ್ರಿಮೂರ್ತಿಗಳನ್ನೂ ಪ್ರತಿಷ್ಠಾಪಿಸಲಾಗಿದ್ದು, ಲಿಂಗದ ಎದುರು ವಿಷ್ಣು ಹಾಗೂ ಶಿವನ ವಾಹನಗಳಾದ ಗರುಡ ಹಾಗೂ ನಂದಿಯನ್ನು ಪ್ರತಿಷ್ಠಾಪಿಸಲಾಗಿದೆ. 17 ನೇ ಶತಮಾನದ ಇತಿಹಾಸ ಹೊಂದಿರುವ ಈ ದೇವಾಲಯ, ದ್ರಾವಿಡ ಶೈಲಿಯಲ್ಲಿ ನಿರ್ಮಾಣವಾಗಿದ್ದು, ದೇವಾಲಯದ ಗೋಪುರ, ಆವರಣಗಳಲ್ಲಿ ಶಿಲ್ಪಕಲಾಕೃತಿಗಳ, ದೇವತೆಗಳ ಕೆತ್ತನೆ ಮಾಡಲಾಗಿದೆ.
ಇನ್ನು ದೇವಾಲಯದ ಮತ್ತೊಂದು ಆಕರ್ಷಣೆ ಎಂದರೆ 4 ಕಂಬಗಳಿದ್ದು, ಅವುಗಳಿಂದ ಹೊರಹೊಮ್ಮುವ ವಿವಿಧ ರೀತಿಯ ನಾದದಿಂದ ಸಂಗೀತ ನುಡಿಸಬಹುದಾಗಿದೆ. ಸಂಗೀತ ಹೊರಹೊಮ್ಮುವಂತೆ ಮಾಡಲು
ಸಾಧ್ಯವಿರುವ ಕಂಬಗಳನ್ನು ಒಂದೇ ಕಲ್ಲಿನಲ್ಲಿ ಕೆತ್ತಲಾಗಿದೆ. ದೇವಾಲಯದ ಆವರಣದಲ್ಲಿ 30 ಸಣ್ಣ ದೇವಾಲಯಗಳಿದ್ದು 22 ಅಡಿ ಎತ್ತರದ ಹನುಮಂತನ ವಿಗ್ರಹವಿದೆ.
ಈ ದೇವಾಲಯ ಶೈವ ಮತ್ತು ವೈಷ್ಣವ ಸಂಪ್ರದಾಯಗಳ ಸಂಗಮವೂ ಆಗಿದ್ದು, ಕನ್ಯಾಕುಮಾರಿ ತಮಿಳುನಾಡಿಗೆ ಸೇರುವುದಕ್ಕೂ ಮುನ್ನ ಈ ದೇವಾಲಯವನ್ನು ತಿರುವಾಂಕೂರು ಮಹಾರಾಜರು ನಿರ್ವಹಿಸುತ್ತಿದ್ದರು.
RELATED ARTICLES  ವೈಯಕ್ತಿಕ ದ್ವೇಷ : ಮಹಿಳೆಯೊಬ್ಬಳ ಮೇಲೆ ಪುನಃ ಹಲ್ಲೆ ? ದೂರು - ಪ್ರತಿದೂರು ದಾಖಲು