ಬಿಜೆಪಿ ಹಾಗೂ ಬೆಳಕು ಗ್ರಾಮೀಣಾಭಿವೃದ್ಧಿ ಟ್ರಸ್ಟ ಸಹಕಾರದಿಂದ ಕುಮಟಾ ತಾಲೂಕಿನ ಸಂತೆಗುಳಿ ಗ್ರಾಮ ಪಂಚಾಯತ ವ್ಯಾಪ್ತಿಯ ಸಾಂತಗಲ್ ನ ಶ್ರೀ ಶಾಂತಿಕಾ ಪರಮೇಶ್ವರಿ ದೇವಾಲಯದ ಸಭಾಭವನದಲ್ಲಿ ಕೇಂದ್ರ ಸರಕಾರದ ಉಜ್ವಲ ಯೋಜನೆಯಡಿ ಎಲ್ಲಾ ವರ್ಗಗಳ 32 ಅರ್ಹ ಫಲಾನುಭವಿಗಳಿಗೆ ಉಚಿತ ಗ್ಯಾಸ್ ಕಿಟ್ ನೊಂದಿಗೆ ಲೈಟರನ್ನು ಸಹ ಉಚಿತವಾಗಿ ವಿತರಿಸಲಾಯಿತು.
ಈ ಸಂದರ್ಭದಲ್ಲಿ ಬಿಜೆಪಿ ಪ್ರಮುಖರೂ ಹಾಗೂ ಟ್ರಸ್ಟ್‍ನ ಅಧ್ಯಕ್ಷರೂ ಆದ ನಾಗರಾಜ ನಾಯಕ ತೊರ್ಕೆಯವರು ಮಾತನಾಡಿ ಕಡುಬಡವರೂ ಕೂಡಾ ಹೊಗೆಮುಕ್ತರಾಗಿ ಎಲ್.ಪಿ.ಜಿ. ಗ್ಯಾಸ್ ಬಳಸಬೇಕು. ಆ ಮೂಲಕ ಸ್ವಾಸ್ಥ್ಯ ಹಾಗೂ ಪರಿಸರ ಸಂರಕ್ಷಣೆ ಉಂಟಾಗಬೇಕೆಂಬ ನಿಟ್ಟಿನಲ್ಲಿ ಪ್ರಧಾನಿ ಮೋದಿ ನೇತ್ರತ್ವದ ಕೇಂದ್ರ ಸರಕಾರ ಉಜ್ವಲ ಯೋಜನೆಯಡಿ ಉಚಿತ ಗ್ಯಾಸ್ ಕಿಟ್ ವಿತರಿಸುತ್ತಿದೆ. ಈ ಜನಪರ ಯೋಜನೆ ಎಲ್ಲಾ ಫಲಾನುಭವಿಗಳ ಮನೆಬಾಗಿಲಿಗೆ ಉಚಿತವಾಗಿ ತಲುಪಬೇಕೆಂಬ ನಿಟ್ಟಿನಲ್ಲಿ ಬಿಜೆಪಿ ಕಾರ್ಯಕರ್ತರು ಹಾಗೂ ಬೆಳಕು ಗ್ರಾಮೀಣಾಭಿವೃದ್ಧಿ ಟ್ರಸ್ಟ್ ಶ್ರಮಿಸುತ್ತಿದ್ದು ಫಲಾನುಭವಿಗಳು ಹಣವ್ಯಯ, ಸಮಯ ವ್ಯರ್ಥ, ಅಲೆದಾಟವಿಲ್ಲದೇ ಈ ಯೋಜನೆಯ ಅನುಕೂಲತೆಯನ್ನು ಪಡೆದುಕೊಳ್ಳುವಂತಾಗಿದೆ. ಪ್ರಸ್ತುತ ದಿನಗಳಲ್ಲಿ 2011 ಕ್ಕೂ ಪೂರ್ವದಲ್ಲಿ ನೋಂದಣಿಯಾದ ಬಿಪಿಎಲ್ ಕಾರ್ಡದಾರರಿಗೆ ಮಾತ್ರ ಈ ಯೋಜನೆಯ ಅನುಕೂಲತೆ ದೊರೆಯುತ್ತಿದ್ದು ಮುಂದಿನ ದಿನಗಳಲ್ಲಿ ಎಲ್ಲಾ
ಬಿಪಿಎಲ್ ಕಾರ್ಡದಾರರಿಗೂ ಈ ಯೋಜನೆಯ ಫಲ ಲಭಿಸಲಿದೆ ಎಂದರು.
ಪ್ರಮುಖರಾದ ದಿನಕರ ಶೆಟ್ಟಿಯವರು ಮಾತನಾಡಿ ಉಜ್ವಲ ಯೋಜನೆ ಪ್ರಧಾನಿ ಮೋದಿಯವರ ಮಹತ್ವಾಕಾಂಕ್ಷಿ ಯೋಜನೆಯಾಗಿದ್ದು ಈ ಯೋಜನೆಯಡಿ ಉಚಿತ ಗ್ಯಾಸ್ ಕಿಟ್
ವಿತರಿಸಲಾಗುತ್ತಿದೆ. ಬೆಳಕು ಗ್ರಾಮೀಣಾಭಿವೃದ್ಧಿ ಟ್ರಸ್ಟ್‍ನ ಅಧ್ಯಕ್ಷರಾದ ನಾಗರಾಜ ನಾಯಕ ತೊರ್ಕೆಯವರು ಉಚಿತವಾಗಿ ಲೈಟರನ್ನು ಸಹ ವಿತರಿಸುವುದರ ಮೂಲಕ ಫಲಾನುಭವಿಗಳು ಸಂಪೂರ್ಣವಾಗಿ ಎಲ್ಲಾ ಸೌಲಭ್ಯಗಳನ್ನು ಉಚಿತವಾಗಿ, ಸುಲಭವಾಗಿ ಪಡೆದುಕೊಳ್ಳುವಂತಾಗಿದೆ ಎಂದು ಶ್ಲಾಘಿಸಿದರು. ಡಾ|| ಜಿ.ಜಿ.ಹೆಗಡೆಯವರು ಮಾತನಾಡಿ ಉಜ್ವಲ ಯೋಜನೆ ಬಡವರಿಗಾಗಿಯೇ ಇರುವ ಯೋಜನೆಯಾಗಿದೆ. ಮುಂದಿನ ದಿನಗಳಲ್ಲೂ ಕೇಂದ್ರ ಸರಕಾರದಿಂದ ಇನ್ನೂ ಹಲವಾರು ಜನಪರ ಯೋಜನೆಗಳು ಜಾರಿಗೆ ಬರಲಿದ್ದು ಜನರಿಗೆ ಇನ್ನೂ ಹೆಚ್ಚಿನ ಅನುಕೂಲತೆ ದೊರೆಯಲಿದೆ. ಈ ಎಲ್ಲಾ ಯೋಜನೆಗಳನ್ನು ಕಾರ್ಯಕರ್ತರು ಫಲಾನುಭವಿಗಳ ಮನೆಬಾಗಿಲಿಗೆ ತಲುಪಿಸುವ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸಬೇಕು ಎಂದು ಕರೆ ನೀಡಿದರು. ಮದನ ನಾಯಕರವರು ಮಾತನಾಡಿ ಗ್ಯಾಸ್ ಬಳಕೆಯ ಸುರಕ್ಷತಾ ಕ್ರಮಗಳ ಕುರಿತು ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಸಿರಿಲ್ ಫರ್ನಾಂಡಿಸ್, ಗೌರಿ ಮರಾಠಿ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಬಿಜೆಪಿ ಮುರೂರು ಶಕ್ತಿಕೇಂದ್ರದ ಅಧ್ಯಕ್ಷರು ಆಗಿರುವ ವಿನಾಯಕ ಭಟ್ ಅವರು ಸ್ವಾಗತಿಸಿ, ನಿರೂಪಿಸಿ, ವಂದಿಸಿದರು.