ಶಿರಸಿ:ಕಾಳುಮೆಣಸಿಗೆ ಕೊಳೆರೋಗ ಬಂದರೆ ಮೆಟಲಾಕ್ಸಿಲ್ ಜೊತೆಗೆ ಮ್ಯಾಂಕೊಜೆಬ್ ಔಷಧ ಸೇರಿಸಿ ರೈತರು ಸಿಂಪರಣೆ ಮಾಡುತ್ತಾರೆ. ಇದರಿಂದ ರೋಗ ನಿಯಂತ್ರಣಕ್ಕೆ ಬಂದರೂ ಮತ್ತೆ ಆರಂಭವಾಗುವ ಸಾಧ್ಯತೆ ಇರುತ್ತದೆ. ಹೀಗಾಗಿ ಒಂದು ವಾರದ ನಂತರ ಮತ್ತೆ ಬೊರ್ಡೊ ದ್ರಾವಣ ಸಿಂಪರಣೆ ಮಾಡಬೇಕಾಗುತ್ತದೆ.
ಕಾಳುಮೆಣಸಿಗೆ ಕಾಡುವ ಕೊಳೆರೋಗ ನಿಯಂತ್ರಿಸಲು ತಾಲ್ಲೂಕಿನ ಹೆಗಡೆಕಟ್ಟಾದ ರೈತ ಸುಬ್ರಹ್ಮಣ್ಯ ಹೆಗಡೆ ಸುಲಭ ಉಪಾಯ ಕಂಡುಕೊಂಡಿದ್ದಾರೆ. ಸತತ ಮೂರು ವರ್ಷಗಳಿಂದ ಅವರು ತೋಟದಲ್ಲಿ ಈ ಪ್ರಯೋಗ ನಡೆಸಿ ಯಶಸ್ವಿಯಾಗಿದ್ದಾರೆ.
ಈ ಔಷಧ ಸಂಯೋಜನೆಯನ್ನು ಬದಲಾಯಿಸಿ ಮೆಟಲಾಕ್ಸಿಲ್ ಜೊತೆಗೆ ಕಾಪರ್ ಆಕ್ಸಿ ಕ್ಲೋರೈಡ್ ಅನ್ನು ನಿರ್ದಿಷ್ಟ ಅನುಪಾ ತದಲ್ಲಿ ಬಳಸಿ ಕೊಳೆರೋಗ ಬಾಧಿತ ಕಾಳುಮೆಣಸು ಬಳ್ಳಿಗೆ ಸಿಂಪರಣೆ ಮಾಡಿದರೆ ಒಂದು ವಾರದ ಅವಧಿ ಯಲ್ಲಿ ಬೋರ್ಡೊ ಹೊಡೆಯಬೇಕಾಗಿಲ್ಲ’ ಎನ್ನುತ್ತಾರೆ ಸುಬ್ರಹ್ಮಣ್ಯ ಹೆಗಡೆಕಟ್ಟಾ.
‘ಔಷಧಗಳನ್ನು ಬಿಡಿಯಾಗಿ ಬಳಸುವುದರಿಂದ ಶೇ 40ರಷ್ಟು ವೆಚ್ಚ ಉಳಿತಾಯವಾಗಿದೆ. 100 ಲೀಟರ್ ನೀರಿಗೆ ಮೆಟಲಾಕ್ಸಿಲ್ ಮೂಲವಾಗಿ ಟ್ರಂಪೆಟ್ ಅನ್ನು 80 ಗ್ರಾಂ ಮತ್ತು ಕಾಪರ್ ಆಕ್ಸಿಕ್ಲೋರೈಡ್ ಮೂಲವಾಗಿ ಬ್ಲೈಟೆಕ್ಸ್ ಅನ್ನು 200 ಗ್ರಾಂ ಸೇರಿಸಿ ಮಾಡಿದ ದ್ರಾವಣವನ್ನು ರೋಗ ಆರಂಭವಾದ ತಕ್ಷಣ ಕಾಳುಮೆಣಸು ಬಳ್ಳಿಗೆ ಸಿಂಪಡಿಸಬೇಕು ಮತ್ತು ಬುಡದಲ್ಲಿ ಔಷಧದಿಂದ ನೆನೆಸಿದರೆ ರೋಗ ನಿಯಂತ್ರಣಕ್ಕೆ ಬರುತ್ತದೆ’ ಎಂಬುದು ಅವರ ಅಭಿಪ್ರಾಯ.
’ಕಾಳುಮೆಣಸು ಬಳ್ಳಿಗೆ ರೋಗ ಬರುವ ಪೂರ್ವದಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ವರ್ಷಕ್ಕೆ ಎರಡು ಬಾರಿ ಶೇ 0.67 ಬೋರ್ಡೊ ದ್ರಾವಣವನ್ನು (150 ಲೀಟರ್ ನೀರಿಗೆ 1 ಕೆ.ಜಿ ಮೈಲುತುತ್ತ ಮತ್ತು 1 ಕೆ.ಜಿ ಸುಣ್ಣದ ಪೌಡರ್ ಸೇರಿಸಿದ ದ್ರಾವಣ) ಸಿಂಪರಣೆ ಮಾಡಬೇಕು. ಪ್ರಚಲಿತದಲ್ಲಿರುವ ಶೇ 1ರ ಬೋರ್ಡೊ ದ್ರಾವಣ ಸಿಂಪಡಿಸುವ ವಿಧಾನಕ್ಕೆ ಹೋಲಿಸಿದಾಗ ಈ ವಿಧಾನದಿಂದ ಶೇ 33 ಹಣ ಉಳಿತಾಯವಾಗುತ್ತದೆ ಜೊತೆಗೆ ಶೇ 33ರಷ್ಟು ಹೆಚ್ಚಿನ ತಾಮ್ರದ ಅಂಶ ಭೂಮಿ ಸೇರುವುದು ಕಡಿಮೆ ಯಾಗುತ್ತದೆ’ ಎಂಬುದು ಅವರು ನೀಡುವ ಸಲಹೆ.