ಜಿನೇವಾ: ತನ್ನ ನೆಲದಲ್ಲಿ ರಕ್ತಪಿಪಾಸುಗಳನ್ನು ಪೋಷಿಸಿ ಬೆಳೆಸುತ್ತಿದ್ದರೂ ಮತ್ತೂಂದು ದೇಶದ ವಿಚಾರದಲ್ಲಿ ಸುಖಾಸುಮ್ಮನೆ ಮೂಗು ತೂರಿಸುವ ಪಾಕಿಸ್ಥಾನಕ್ಕೆ ಶನಿವಾರ ಭಾರತವು ಕಟು ಪದಗಳ ಮೂಲಕವೇ ನೈತಿಕತೆಯ ಪಾಠ ಮಾಡಿದೆ. ವಿಶ್ವಸಂಸ್ಥೆಯಲ್ಲಿ ಕಾಶ್ಮೀರ ವಿವಾದವನ್ನು ಪ್ರಸ್ತಾವಿಸಿ, ಚಪ್ಪಾಳೆ ಗಿಟ್ಟಿಸಿಕೊಳ್ಳಲು ಯತ್ನಿಸಿದ್ದ ಪಾಕಿಸ್ಥಾನವನ್ನು ಭಾರತವು ಸರಿಯಾಗಿಯೇ ಝಾಡಿಸಿದೆ.
“ನಮ್ಮ ಆಂತರಿಕ ವಿಚಾರದಲ್ಲಿ ಎಳ್ಳಷ್ಟೂ ಹಸ್ತಕ್ಷೇಪ ಮಾಡುವ ಅಧಿಕಾರ ನಿಮಗಿಲ್ಲ. ಭವಿಷ್ಯದಲ್ಲಿ ಇಂಥ ಹೇಳಿಕೆ ನೀಡುವಾಗ ಎಚ್ಚರಿಕೆಯಿಂದಿರಿ’ ಎಂದು ಹೇಳಿ ವಿಶ್ವಸಮುದಾಯದ ಮುಂದೆಯೇ ಪಾಕಿಸ್ಥಾನಕ್ಕೆ ಭಾರತ ತೀವ್ರ ಮುಖಭಂಗ ಮಾಡಿದೆ.
ಇದು ನಡೆದದ್ದು ಜಿನೇವಾದ ವಿಶ್ವಸಂಸ್ಥೆ ಕಚೇರಿಯಲ್ಲಿ. ಮುಸ್ಲಿಂ ರಾಷ್ಟ್ರಗಳ ಒಕ್ಕೂಟವಾದ ಇಸ್ಲಾ ಮಿಕ್ ಸಹಕಾರ ಸಂಘ (ಒಐಸಿ)ದ ಪರ ಪಾಕ್ ವಿಶ್ವಸಂಸ್ಥೆಯಲ್ಲಿ ಕಾಶ್ಮೀರದ ಹಿಂಸಾಚಾರವನ್ನು ಪ್ರಸ್ತಾ ವಿಸಿತ್ತು. ಕಾಶ್ಮೀರದಲ್ಲಿನ ಸ್ವದೇಶಿ ಚಳವಳಿಗೆ ಭಾರತ ತೊಂದರೆ ಉಂಟುಮಾಡುತ್ತಿದೆ. ಅಲ್ಲಿ ನಿರಂತರ ಹಿಂಸಾಚಾರ ನಡೆಯುತ್ತಿದ್ದು, ಅದನ್ನು ತಡೆಯುವ ಅಗತ್ಯವಿದೆ ಎಂದೆಲ್ಲ ಆರೋಪಗಳ ಪಟ್ಟಿ ಮುಂದಿಟ್ಟು ಭಾರತವನ್ನು ಹೀಗಳೆಯಲು ಯತ್ನಿಸಿತ್ತು.
ಇದಕ್ಕೆ “ಭಾರತದ ಪ್ರತಿಕ್ರಿಯಿಸುವ ಹಕ್ಕು’ ನಿಯಮದಡಿ ಮಾತನಾಡಿದ ವಿಶ್ವಸಂಸ್ಥೆಯಲ್ಲಿನ ಭಾರತದ ಖಾಯಂ ರಾಯಭಾರ ಕಚೇರಿಯ ಕಾರ್ಯದರ್ಶಿ ಸುಮಿತ್ ಸೇs…, “ಜಮ್ಮು ಮತ್ತು ಕಾಶ್ಮೀರ ಎನ್ನುವುದು ಭಾರತದ ಅವಿಭಾಜ್ಯ ಹಾಗೂ ಎಂದೂ ಪ್ರತ್ಯೇಕಿಸಲಾಗದ ಅಂಗ. ಹೀಗಾಗಿ, ಅಲ್ಲಿನ ಎಲ್ಲ ಸಂಗತಿಗಳೂ ನಮ್ಮ ಆಂತರಿಕ ವಿಚಾರ. ಅದರ ಬಗ್ಗೆ ಮಾತನಾಡಲು ನೀವ್ಯಾರು’ ಎಂದು ಕೇಳುವ ಮೂಲಕ ಪಾಕಿಸ್ಥಾನದ ಬಾಯಿ ಮುಚ್ಚಿಸಿದರು. ಅಲ್ಲದೆ, “ಒಐಸಿ ನೀಡಿರುವ ಹೇಳಿಕೆಯಲ್ಲಿ ಸತ್ಯಕ್ಕೆ ದೂರವಾದ ಅಂಶಗಳೇ ತುಂಬಿವೆ. ಜಮ್ಮು ಮತ್ತು ಕಾಶ್ಮೀರದ ವಿಚಾರದಲ್ಲಿ ಹಾದಿ ತಪ್ಪಿಸುವಂಥ ಉಲ್ಲೇಖಗಳನ್ನು ಮಾಡಲಾಗಿದೆ. ಇವೆಲ್ಲವನ್ನೂ ಭಾರತವು ಖಂಡತುಂಡವಾಗಿ ನಿರಾಕರಿಸುತ್ತದೆ. ಅಷ್ಟಕ್ಕೂ, ನಮ್ಮ ದೇಶದ ಆಂತರಿಕ ವಿಚಾರದಲ್ಲಿ ಮೂಗು ತೂರಿಸುವ ಯಾವ ಅಧಿಕಾರವೂ ಒಐಸಿ ಗಿಲ್ಲ. ಈಗ ಮಾತ್ರವಲ್ಲ, ಭವಿಷ್ಯದಲ್ಲೂ ಇಂತಹ ಹೇಳಿಕೆ ನೀಡುವಾಗ ಎಚ್ಚರಿಕೆಯಿಂದಿರಿ ಎಂದು ನಾವು ಒಐಸಿಗೆ ಹೇಳಬಯಸುತ್ತೇವೆ’ ಎಂದರು.