ಹೊನ್ನಾವರದ ನವಿಲಗೋಣ ಮಹಿಳಾ ಮಂಡಳದ ೫೦ ನೇ ವಾರ್ಷಿಕೋತ್ಸವದ ಅಂಗವಾಗಿ ಕ್ಯಾಲೆಂಡರ್ ಬಿಡುಗಡೆ ಸಮಾರಂಭ ನಡೆಸಲಾಯಿತು. ಕಾರ್ಯಕ್ರಮಕ್ಕೆ ಆಗಮಿಸಿ ಕ್ಯಾಲೆಂಡರ್ ಬಿಡುಗಡೆಗೊಳಿಸಿ ಮಾತನಾಡಿದ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರು ಹಾಗೂ ಕೆಡಿಸಿಸಿ ಬ್ಯಾಂಕಿನ ನಿರ್ದೇಶಕರೂ ಆದ ಶ್ರೀ ಶಿವಾನಂದ ಹೆಗಡೆ ಕಡತೋಕಾ ಅವರು ಕ್ಯಾಲೆಂಡರ್ ಸಾಂಪ್ರದಾಯಿಕ ಮತ್ತು ಆಧುನಿಕವಾಗಿದ್ದು ಎಲ್ಲ ವಿಷಯಗಳ ಸಂಗ್ರಹವಾಗಿದೆ ಎಂದರು. ಇತ್ತೀಚಿನ ದಿನಗಳಲ್ಲಿ ಮಹಿಳಾ ಮಂಡಳಗಳು ಕಣ್ಮರೆಯಾಗುತ್ತಿರುವ ನಡುವೆಯೂ ನವಿಲಗೋಣ ಮಹಿಳಾ ಮಂಡಳ ಕಳೆದ ೫೦ ವರ್ಷಗಳಿಂದ ಸಕ್ರಿಯವಾಗಿ ನಡೆದು ಬಂದ ರೀತಿಯನ್ನು ಅಭಿನಂದಿಸುತ್ತಾ, ಯಾವ ಊರಿನಲ್ಲಿ ಮಹಿಳೆಯರ ಸಂಘಟನೆ ಉತ್ತಮವಾಗಿರುತ್ತದೆಯೋ ಅಂತಹ ಊರು ಸಮೃದ್ಧವಾಗಿ ಅಭಿವೃದ್ಧಿ ಸಾಧಿಸುತ್ತದೆ ಎಂದರು. ಇಷ್ಟು ವರ್ಷ ಯಾವುದೇ ಅನುದಾನ ಮತ್ತು ಸಹಾಯವಿಲ್ಲದೆ ಸಂಘಟನೆಯಿಂದ ಉತ್ತಮವಾಗಿ ನಡೆದು ಬಂದಿದೆ ಇದು ಹೀಗೆಯೇ ವಿಸ್ತಾರಗೊಳ್ಳಲಿ ಎಂದು ಹಾರೈಸುತ್ತ ಮಹಿಳಾ ಮಂಡಳಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಸದಸ್ಯತ್ವ ಹೊಂದಲು ಆರಂಭವಾದ ಮಹಿಳಾ ಮಂಡಳದ “ಸದಸ್ಯತ್ವ ಅಭಿಯಾನ”ಕ್ಕೆ ತಮ್ಮ ಬೆಂಬಲ ನೀಡಿದರು. ಮಹಿಳಾ ಮಂಡಳಕ್ಕೆ ತಮ್ಮದೇ ಆದ ಉದ್ಯೋಗ ನಡೆಸಲು ಆರ್ಥಿಕವಾಗಿ ಸಹಾಯ ಬೇಕಿದ್ದಲ್ಲಿ ಸೊಸೈಟಿ ಯಿಂದ ಕಡಿಮೆ ಬಡ್ಡಿ ದರದಲ್ಲಿ ಸಾಲ ನೀಡುವ ಭರವಸೆ ನೀಡಿದರು.
ಕಾರ್ಯಕ್ರಮದ ಉದ್ಘಾಟಕರಾಗಿ ಆಗಮಿಸಿದ ನವಿಲಗೋಣ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀ ಸತೀಶ್ ಹೆಬ್ಬಾರ್ ಅವರು ಮಹಿಳಾ ಮಂಡಳದಲ್ಲಿ ಮುಂದಿನ ದಿನಗಳಲ್ಲಿ ನಡೆಯುವ ನಮ್ಮ ಬೆಂಬಲ ಮತ್ತು ಸಹಕಾರ ಯಾವಾಗಲೂ ಇರುತ್ತದೆ ಎಂಬ ಭರವಸೆ ನೀಡಿದರು. ಮುಂಬರುವ ಸಮಯದಲ್ಲಿ ಮಹಿಳಾ ಮಂಡಳ ಇನ್ನಷ್ಟು ಬೆಳವಣಿಗೆ ಆಗಲಿ ಎಂದು ಹಾರೈಸಿದರು.
ಕಾರ್ಯಕ್ರಮದಲ್ಲಿ ವೇದಿಕೆಯ ಮೇಲೆ ಮಹಿಳಾ ಮಂಡಳದ ಅಧ್ಯಕ್ಷೆ ಶ್ರೀಮತಿ ಸುಧಾ ಭಟ್ ಅವರು ಸಭಾಧ್ಯಕ್ಷರಾಗಿ ಉಪಸ್ಥಿತರಿದ್ದು ಮಹಿಳಾ ಮಂಡಳದ ನೂತನ ಸದಸ್ಯರನ್ನು ಪರಿಚಯಿಸಿದರು.
ಇನ್ನುಳಿದಂತೆ ಕಾರ್ಯಕ್ರಮದಲ್ಲಿ ಮಹಿಳಾ ಮಂಡಳದ ಮಾಜಿ ಸದಸ್ಯೆ ಶ್ರೀಮತಿ ಸುಬ್ಬಿ ವಿಘ್ನೇಶ್ವರ ಭಟ್, ಒಕ್ಕೂಟದ ಅಧ್ಯಕ್ಷೆ ಮಂಗಲಾ ಭಟ್ ಹಾಗೂ ಗ್ರಾಮ ಪಂಚಾಯತ್ ಸದಸ್ಯರಾದ ರವಿ ನಾಯ್ಕ ಉಪಸ್ಥಿತರಿದ್ದರು.
ಮಹಿಳಾ ಮಂಡಳದ ಸದಸ್ಯರಾದ ಶ್ರೀಮತಿ ಸಂಧ್ಯಾ ಭಟ್ ಹಾಗೂ ರಂಜನಾ ಶೆಟ್ಟಿ ಅವರು ಗಣೇಶ ಸ್ತುತಿ ಹಾಡಿದರು. ಶ್ರೀಮತಿ ತಾರಾ ಭಟ್ ಅವರು ಆಗಮಿಸಿದ ಗಣ್ಯರನ್ನು ಸ್ವಾಗತಿಸಿದರು. ಶ್ರೀಮತಿ ಲಲಿತಾ ಭಟ್ ಅವರು ಆಗಮಿಸಿದ ಗಣ್ಯರಿಗೆ ವಂದನೆ ಸಲ್ಲಿಸಿದರು. ಶ್ರೀಮತಿ ಗೀತಾ ಭಟ್ ಅವರು ಕಾರ್ಯಕ್ರಮದ ನಿರೂಪಣೆಯನ್ನು ನಡೆಸಿಕೊಟ್ಟರು.